Advertisement
ಮಂಗಳೂರು ತಾಲೂಕಿನ ಉಳ್ಳಾಲದಿಂದ ಕುಂದಾಪುರ ತಾಲೂಕಿನ ಗಂಗೊಳ್ಳಿಯವರೆಗೆ ಸಮುದ್ರದಲ್ಲಿ ಬೃಹತ್ ಅಲೆಗಳು ಕಿನಾರೆಗೆ ಅಪ್ಪಳಿಸುತ್ತಿದೆ. ಇದುವರೆಗೆ ಕಂಡರಿಯದ ಕಡಲಬ್ಬರ ಕಂಡು ಜನರು ಭೀತಿಗೊಳಗಾಗಿದ್ದಾರೆ. ಸಮುದ್ರ ಉಬ್ಬರದ ಅವಧಿಯಲ್ಲಿಯೇ ಒಖೀ ಚಂಡಮಾರುತದಿಂದಾಗಿ ರಭಸವಾಗಿ ಗಾಳಿಯೂ ಬೀಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಸಮುದ್ರದಲ್ಲಿ ಆಗಾಗ್ಗೆ ಸುಳಿಗಾಳಿ ಬೀಸಿ ನೀರು ರಭಸವಾಗಿ ಕಿನಾರೆಗೆ ಅಪ್ಪಳಿಸುತ್ತಿದೆ. ಸಮುದ್ರ ಬದಿಯ ಮರಳನ್ನು ಕೂಡ ಸಮುದ್ರದೊಳಗೆ ಸೆಳೆಯುತ್ತಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
Related Articles
Advertisement
ಉಚ್ಚಿಲದಿಂದ ಮೊಗವೀರಪಟ್ಣದವರೆಗೆ ಸಾವಿರಾರು ಜನರು ಮನೆ ಬಿಟ್ಟು ರಸ್ತೆ ಮೇಲೆ ನಿಂತಿದ್ದರು. ರಾತ್ರಿ 11.30ರ ವರೆಗೂ ಅಬ್ಬರ ಕಡಿಮೆ ಯಾಗಲಿಲ್ಲ. ಕೋಟೆಪುರದಲ್ಲಿ ಮೀನಿನೆಣ್ಣೆಯ ಕಾರ್ಖಾನೆ ಯಲ್ಲಿದ್ದ ಕಾರ್ಮಿಕರು ರಾತ್ರಿ 11 ಗಂಟೆ ಸುಮಾರಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಎರಡು ದೋಣಿ ಸಮುದ್ರಪಾಲು: ಬೈಕಂಪಾಡಿ, ಚಿತ್ರಾಪುರ, ಪಣಂಬೂರು ಪರಿಸರದಲ್ಲಿಯೂ ಕಡಲು ಉಗ್ರವಾಗಿದೆ. ತಣ್ಣೀರುಬಾವಿಯಲ್ಲಿ ಎರಡು ನಾಡದೋಣಿಗಳು ಸಮುದ್ರ ಪಾಲಾಗಿವೆ. ಮೀನಕಳಿಯದಲ್ಲಿ ಸುಮಾರು 25 ಬೋಟ್‌ಗಳನ್ನು ಕಿನಾರೆಯಿಂದ ಮೇಲಕ್ಕೆ ತರಲಾಗಿದೆ.
ಆಪದ್ಭಾಂದವ ಜೆಸಿಬಿ: ಮೀನಕಳಿಯಲ್ಲಿದ್ದ ಸ್ಥಳೀಯರೋರ್ವರ ಜೆಸಿಬಿ ಕೂಡಲೇ ಧಾವಿಸಿ ಕಡಲ್ಕೊರೆತಕ್ಕಾಗಿ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ 12 ಬೋಟ್‌ಗಳನ್ನು ರಕ್ಷಿಸಿತು. ಇಲ್ಲಿ ಸಮುದ್ರ ಸುಮಾರು 200ರಿಂದ 250 ಮೀಟರ್ ಒಳಗೆ ಪ್ರವೇಶಿಸಿದೆ.
ಪಣಂಬೂರು ಬೀಚ್ ಅಂಗಡಿಗಳಿಗೆ ನೀರುಪಣಂಬೂರು ಬೀಚ್ ಪ್ರದೇಶದಲ್ಲಿಯೂ ಸಮುದ್ರ ಉಕ್ಕೇರಿದ್ದು, ಬೀಚ್ ಬದಿಯಲ್ಲಿನ ಸರ್ಕಲ್ ವರೆಗೆ ನೀರು ಬಂದಿದೆ. ಅಂಗಡಿಗಳಿಗೂ ನೀರು ನುಗ್ಗಿದೆ. ಚಿತ್ರಾಪುರದಲ್ಲಿ ಪಿಶರೀಸ್ ರಸ್ತೆವರೆಗೆ ನೀರು ಬಂದಿದೆ. ಸಸಿಹಿತ್ಲು ಬೀಚ್‌ನಲ್ಲಿ ಕೂಡ ನೀರು ರಸ್ತೆ ಸಮೀಪಕ್ಕೆ ಬಡಿಯುತ್ತಿದೆ. ಇಲ್ಲಿದ್ದ ಹಲವಾರು ದೋಣಿಗಳನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಯಿತು. ಪಡುಬಿದ್ರಿ, ಕಾಪು, ಉದ್ಯಾವರ, ಮಲ್ಪೆ, ಗಂಗೊಳ್ಳಿಯಲ್ಲಿಯೂ ಸಮುದ್ರ ಉಕ್ಕೇರಿದೆ. ಇಲ್ಲಿಯೂ ಸಮುದ್ರ ಬದಿಯಲ್ಲಿದ್ದ ದೋಣಿಗಳನ್ನು ಮೇಲಕ್ಕೆತ್ತಲಾಗಿದೆ. ಇಲ್ಲಿನ ಜನರೂ ಆತಂಕಿತಗೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರು ಉದ್ಯಾವರ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ. ಜನರನ್ನು ಸ್ಥಳಾಂತರಿಸಲೆಂದು ನಾಲ್ಕು ಬಸ್‌ಗಳನ್ನು ತಂದಿರಿಸಲಾಗಿತ್ತು. ಆದರೆ ಸ್ಥಳೀಯರು ಬೇರೆಡೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಪುವಿನಲ್ಲಿ ದೀಪಸ್ತಂಭದಲ್ಲಿಗೆ ಹೋಗುವ ದಾರಿ ಮುಳುಗಡೆಯಾಗಿದೆ. ಈ ರೀತಿಯ ಅಬ್ಬರ ಕಂಡಿಲ್ಲ. ಇದೊಂದು ಸುನಾಮಿ ರೀತಿಯಂತಿದೆ. ಇನ್ನೇನು ಆಗುತ್ತದೆಯೋ ಗೊತ್ತಾಗದು. ಒಟ್ಟಾರೆ ಪರಿಸ್ಥಿತಿ ಬಿಗಡಾಯಿಸಿದೆ.
-ಎ.ಕೆ. ಮೊಹಿದ್ದೀನ್. ಉಳ್ಳಾಲದ ಸ್ಥಳೀಯ