ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಮಾರ್ಪಾಡಾಗಿದ್ದು, ಶನಿವಾರ ಬೆಳಗ್ಗೆ “ಜವಾದ್’ ಚಂಡಮಾರುತವು ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯನ್ನು ತಲುಪಲಿದೆ. ಡಿ.5ರ ಮಧ್ಯಾಹ್ನ ಪುರಿ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆಂಧ್ರದ ಉತ್ತರ ಕರಾವಳಿ, ಒಡಿಶಾದ ದಕ್ಷಿಣ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಲಿದೆ. ಆಂಧ್ರದ ಶ್ರೀಕಾಕುಲಂ, ವಿಜಯನಗರಮ್, ವಿಶಾಖಪಟ್ಟಣ ಜಿಲ್ಲೆಗಳಿಗೆ ಹಾಗೂ ಒಡಿಶಾದಲ್ಲಿ ಗಜಪತಿ, ಗಂಜಂ, ಪುರಿ, ಜಗತ್‌ಸಿಂಘಪುರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೇ, ಪಶ್ಚಿಮ ಬಂಗಾಲ, ಮೇಘಾಲಯ, ತ್ರಿಪುರ, ಅಸ್ಸಾಂ ರಾಜ್ಯಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಎನ್‌ಡಿಆರ್‌ಎಫ್ ಸನ್ನದ್ಧ: ಚಂಡಮಾರುತ ಹಿನ್ನೆಲೆಯಲ್ಲಿ, ರಾಜ್ಯಗಳಿಗೆ 46 ಎನ್‌ಡಿಆರ್‌ಎಫ್ ತಂಡಗಳನ್ನು ರವಾನಿಸಲಾಗಿದೆ. ಪ್ರತೀ ತಂಡದಲ್ಲೂ 30 ಸಿಬಂದಿಯಿದ್ದು, ಎಲ್ಲ ರೀತಿಯ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ತಂಡದ ಡಿಜಿ ಅತುಲ್ ಕರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ
Related Articles
ಈ ಚಂಡಮಾರುತ ಎಷ್ಟು ಪ್ರಬಲ?
ಈ ಚಂಡಮಾರುತಕ್ಕೆ “ಜವಾದ್’ ಎಂದು ನಾಮಕರಣ ಮಾಡಿದ್ದು ಸೌದಿ ಅರೇಬಿಯಾ. ಜವಾದ್ ಎಂದರೆ “ಉದಾತ್ತ’ ಎಂದರ್ಥ. ಈ ಚಂಡಮಾರುತವು “ಗುಲಾಬ್’ಗಿಂತ ಪ್ರಬಲವಾಗಿದ್ದು, “ತಿತ್ಲಿ’ಗಿಂತ ಕಡಿಮೆ ತೀವ್ರತೆ ಹೊಂದಿರುತ್ತದೆ. ರವಿವಾರ ಪುರಿ ಕರಾವಳಿಗೆ ಅಪ್ಪಳಿಸುವ ವೇಳೆ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.