Advertisement

Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!

09:50 AM Dec 02, 2024 | Team Udayavani |

ಪುದುಚೇರಿ/ಚೆನ್ನೈ: ಪುದುಚೇರಿ ಕರಾವಳಿ ಸಮೀಪ ಶನಿವಾರ ರಾತ್ರಿಯೇ ಅಪ್ಪಳಿಸಿರುವ ಫೈಂಜಾಲ್‌ ಚಂಡಮಾರುತ ಭಾನುವಾರ ದುರ್ಬಲಗೊಂಡಿದ್ದರೂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯ ಅಬ್ಬರ ಮಾತ್ರ ತಗ್ಗಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪುದುಚೇರಿ ಅಕ್ಷರಶಃ ನಲುಗಿದ್ದು, ಕಳೆದ 30 ವರ್ಷಗಳಲ್ಲೇ ಅತ್ಯಧಿಕ ಅಂದರೆ 46 ಸೆಂ.ಮೀ. ಮಳೆ ಕೇವಲ 24 ಗಂಟೆಗಳ ಅವಧಿಯಲ್ಲಿ ಸುರಿದಿದೆ. 2004ರ ಅ.31ರಂದು ಸುರಿದ 21 ಸೆಂ.ಮೀ. ಮಳೆಯೇ ಈ ಹಿಂದಿನ ಅತ್ಯಧಿಕ ಮಳೆಯಾಗಿತ್ತು.

Advertisement

3 ಸಾವು:
ಸೈಕ್ಲೋನ್‌ನಿಂದಾಗಿ ಭಾರೀ ಮಳೆ, ಪ್ರವಾಹ ಉಂಟಾಗಿದ್ದು ಚೆನ್ನೈನಲ್ಲಿ ವಿದ್ಯುತ್‌ ಅವಘಡಗಳಿಂದಾಗಿಯೇ ಪ್ರತ್ಯೇಕ ಘಟನೆಗಳಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಭಾರೀ ಬಿರುಗಾಳಿಯ ಪರಿಣಾಮ ಎರಡೂ ರಾಜ್ಯಗಳಲ್ಲಿ ಹಲವು ಮರಗಳು ಧರೆಗುರುಳಿದ್ದು, ಮಳೆಯಿಂದಾಗಿ ಅನೇಕ ತಗ್ಗುಪ್ರದೇಶಗಳು, ಕರಾವಳಿ ತೀರ ಪ್ರದೇಶಗಳು ಮುಳುಗಡೆಯಾಗಿವೆ. ಭಾರತೀಯ ಸೇನೆಯೂ ನೆರವಿಗೆ ಧಾವಿಸಿದ್ದು, ದೋಣಿಗಳ ಮೂಲಕ ಜನರನ್ನು ರಕ್ಷಿಸಿವೆ. ಪುದುಚೇರಿಯ 3 ಭಾಗಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 200 ಮಂದಿಯನ್ನು ಯೋಧರು ರಕ್ಷಿಸಿದ್ದಾರೆ.

ಧಾರಾಕಾರ ಮಳೆ:
ತ.ನಾಡಿನ ವಿಲ್ಲುಪುರಂನಲ್ಲಿ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 49 ಸೆಂ.ಮೀ., ನೆಮ್ಮೆಲಿಯಲ್ಲಿ 46 ಸೆಂ.ಮೀ., ವನೂರಿನಲ್ಲಿ 41 ಸೆಂ.ಮೀ. ಮಳೆಯಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಾಹಿತಿ ನೀಡಿದ್ದಾರೆ. ಸಿಎಂ ಸ್ಟಾಲಿನ್‌ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್‌ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.

ವಿಮಾನ ಕಾರ್ಯಾಚರಣೆ ಪುನಾರಂಭ:
ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು 16 ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಸಂಚಾರ ಪುನಾರಂಭಗೊಂಡಿದೆ. ಇದೇ ವೇಳೆ, ವೆಲ್ಲೂರು, ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಸೋಮವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಲ್ಯಾಂಡಿಂಗ್‌ ವೇಳೆ ಓಲಾಡಿದ ವಿಮಾನ: ವಿಡಿಯೋ ವೈರಲ್‌
ಭಾರೀ ಬಿರುಗಾಳಿಯ ನಡುವೆಯೇ ಚೆನ್ನೈನಲ್ಲಿ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ದು, ಈ ವೇಳೆ ಗಾಳಿಯ ಹೊಡೆತಕ್ಕೆ ಸಿಲುಕಿ ವಿಮಾನವು ಓಲಾಡಿದ ಘಟನೆ ನಡೆದಿದೆ. ರನ್‌ವೇಗಿಂತ ಕೆಲವೇ ಅಡಿ ಎತ್ತರದಲ್ಲಿ ವಿಮಾನವು ಎಡಕ್ಕೆ ವಾಲಿದ್ದು, ಕೂಡಲೇ ಪೈಲಟ್‌ ವಿಮಾನವನ್ನು ಲ್ಯಾಂಡ್‌ ಮಾಡದೇ ಮತ್ತೆ ಹಾರಿಸಿದ್ದಾರೆ. ಈ ವೇಳೆ ವಿಮಾನ ಓಲಾಡುತ್ತಿರುವ ಆತಂಕಕಾರಿ ವಿಡಿಯೋ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next