ಹೊಸದಿಲ್ಲಿ: ಗಂಟೆಗೆ 105 ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿಯನ್ನು ತಲುಪಿರುವ ಅಸಾನಿ ಚಂಡಮಾರುತವು ಹಲವು ರಾಜ್ಯಗಳ ಜನಜೀವನವನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಮಂಗಳವಾರ ರಾತ್ರಿ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ, ಸೈಕ್ಲೋನ್ ಪ್ರಭಾವವೆಂಬಂತೆ ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕೇರಳಗಳಲ್ಲಿ ಭಾರೀ ಗಾಳಿ- ಮಳೆಯಾಗಿದೆ.
ಗುರುವಾರದವರೆಗೂ ಮಳೆ ಮುಂದುವರಿಯಲಿದ್ದು, ಈ ರಾಜ್ಯಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಮಂಗಳವಾರ ಕರಾ ವಳಿ ನಗರವಾದ ವಿಶಾಖಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದ್ದು, ತೀವ್ರ ಬಿರುಗಾಳಿ ಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಬಂದರುನಗರಿಯಲ್ಲಿ ಚಂಡಮಾರುತದ ಪ್ರಭಾವ ಅಧಿಕವಾಗಿರಲಿದೆ ಎಂಬ ಭೀತಿಯಿಂದ ವಿಶಾಖಪಟ್ಟಣಂ ಬಂದರಿನ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ವಿಶಾಖಪಟ್ಟಣಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಯು 23 ವಿಮಾನಗಳನ್ನು ರದ್ದು ಮಾಡಿದೆ. ಏರ್ ಏಷ್ಯಾದ ನಾಲ್ಕು ವಿಮಾನಗಳ ಸಂಚಾರವನ್ನೂ ರದ್ದು ಮಾಡಲಾಗಿದೆ. ಆಂಧ್ರಪ್ರದೇಶದ ಕರಾವಳಿ ಯಲ್ಲಿ ಹಾಗೂ ಮೇ 12ರವರೆಗೆ ಸಿಕ್ಕಿಂ, ಬಿಹಾರ, ಜಾರ್ಖಂಡ್‌ನಲ್ಲಿಯೂ ಮಳೆಯಾಗ ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾ
ಚಂಡಮಾರುತವು ಕರಾವಳಿಗೆ ಸಮೀಪಿಸುತ್ತಿದ್ದಂತೆ, ಒಡಿಶಾದ ಗಂಜಾಮ್ ಆಡಳಿತವು ಗೋಪಾಲಪುರ ಬೀಚ್ ಸೇರಿದಂತೆ ಎಲ್ಲ ಸಮುದ್ರತೀರಗಳನ್ನೂ 2 ದಿನಗಳ ಕಾಲ ಮುಚ್ಚಿ ಆದೇಶ ಹೊರಡಿಸಿದೆ. ಅಲೆಯ ಅಬ್ಬರದಿಂದಾಗಿ ಸಮುದ್ರದ ಮಧ್ಯೆ ಸಿಲುಕಿದ್ದ ಒಡಿಶಾದ 11 ಮೀನುಗಾರರನ್ನು ಕರಾವಳಿ ರಕ್ಷಕ ಪಡೆಯು ರಕ್ಷಿಸಿ ಕರೆತಂದಿದೆ. ಈ ನಡುವೆ 60 ಮೀನು ಗಾರರಿದ್ದ ದೋಣಿಯೊಂದು ಸಮುದ್ರದ ನಡುವೆ ದೈತ್ಯ ಅಲೆಗಳಿಗೆ ಸಿಕ್ಕು ಮುಗುಚಿ ಕೊಂಡಿದ್ದು ಅದರಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಿಸಲಾಗಿದೆ.
Related Articles
ಆಂಧ್ರಪ್ರದೇಶ
ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿ ಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ವಿಶಾಖ ಪಟ್ಟಣಂ ಏರ್‌ಪೋರ್ಟ್‌ಗೆ ಬೆಂಗಳೂರು, ಕರ್ನೂಲ್, ಹೈದರಾಬಾದ್‌ನಿಂದ ಬಂದ ವಿಮಾನಗಳಿಗೆ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ಹೀಗಾಗಿ ಅವುಗಳನ್ನು ಮರಳಿ ಕಳುಹಿಸಲಾಗಿದ್ದು, ಹಲವು ವಿಮಾನಗಳ ಸಂಚಾರವನ್ನೇ ರದ್ದು ಮಾಡಲಾಗಿದೆ.
ಪಶ್ಚಿಮ ಬಂಗಾಲ
ಕೆಲವು ಭಾಗಗಳಲ್ಲಿ ಮಧ್ಯಮದಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಇನ್ನೂ 2 ದಿನ ಇದು ಮುಂದುವರಿಯಲಿದೆ. ಹೆಚ್ಚು ಹಾನಿ- ನಷ್ಟ ಉಂಟಾಗದಂತೆ ತಡೆಯಲು ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಮಿಳುನಾಡು
ಚೆನ್ನೈ ಏರ್‌ಪೋರ್ಟ್‌ನಲ್ಲಿ ಜೈಪುರ, ವಿಶಾಖಪಟ್ಟಣ, ಮುಂಬಯಿ, ಹೈದರಾಬಾದ್ ಸೇರಿದಂತೆ ವಿವಿಧ ಕಡೆಗಳಿಂದ ಬರಬೇಕಾಗಿದ್ದ 10 ವಿಮಾನ ಗಳನ್ನು ರದ್ದು ಮಾಡಲಾಗಿದೆ. ಕೊಯಂ ಬೇಡು, ಅನ್ನಾನಗರ, ಚೂಲೈಮೇಡು, ನುಂಗಂಬಾಕ್ಕಮ್‌ನಲ್ಲಿ ಭಾರೀ ಮಳೆಯಾಗುತ್ತಿದೆ.
ಕೇರಳ
ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ವರ್ಷಧಾರೆ ಮುಂದುವರಿದಿದ್ದು, ಶುಕ್ರವಾರದವರೆಗೂ ಇದೇ ಸ್ಥಿತಿಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.