Advertisement

ಮಹಿಳಾ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಸೈಕಲ್ ಮೇಲೆ ಸುತ್ತುವ ಆಶಾ ಮಾಳ್ವಿಯಾ

04:22 PM Dec 11, 2022 | Team Udayavani |

ಕಾರವಾರ: ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಸೈಕಲ್ ಮೇಲೆ ಸುತ್ತುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಭೂಪಾಲ್ ನಗರದ ಯುವತಿ ಆಶಾ ಮಾಳ್ವಿಯಾ.

Advertisement

ಇವರು ನವೆಂಬರ್1 ರಂದು ಸೈಕಲ್ ಮೇಲೆ ಪ್ರಯಾಣ ಆರಂಭಿಸಿ ಶನಿವಾರ ಸಂಜೆ ಕಾರವಾರ ತಲುಪಿದರು. ಇಂದು ಮಧ್ಯಾಹ್ನ ಅಂಕೋಲಾ ಕಡೆಗೆ ಸೈಕಲ್ ಹತ್ತಿ ಹೊರಟರು. 20000 ಕಿಲೋ ಮೀಟರ್ ಸೈಕ್ಲಿಂಗ್ ಅವರ ಉದ್ದೇಶ. ಈ ಪಯಣದ ಹಾದಿಯಲ್ಲಿ ಅಲ್ಲಲ್ಲಿ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೆ ಭೇಟಿ ಮಾಡಿ, ಮಹಿಳೆಯರ ಸುರಕ್ಷತೆ ಹಾಗೂ ಧೈರ್ಯ ಹಾಗೂ ವಹಿಸಬೇಕಾದ ಜಾಣ್ಮೆ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ.

ಆಶಾ ಈಗಾಗಲೇ ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸೈಕ್ಲಿಂಗ್ ‌ಮುಗಿಸಿ ಕರ್ನಾಟಕದಲ್ಲಿ ಪಯಣ ಆರಂಭಿಸಿದ್ದಾರೆ. ಈಗಾಗಲೇ 3700 ಕಿ.ಮೀ.ದೂರ ಕ್ರಮಿಸಿದ್ದಾರೆ. ಮಹಾರಾಷ್ಟ್ರ, ‌ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತೆ ವಿನಂತಿಸಿದ್ದಾಳೆ. ಬೆಂಗಳೂರು ತಲುಪಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿಯ ಉದ್ದೇಶ ಸಹ ಆಶಾ ಮಾಳವೀಯಾಗೆ ಇದೆ.

ಮುರುಡೇಶ್ವರದಲ್ಲಿ ಒಂದು ದಿನ ವಿಶ್ರಾಂತಿ ಪಡೆದು ನಂತರ ಪಯಣ ಮುಂದುವರಿಯಲಿದೆ. ಕೇರಳ, ನಂತರ ಬೆಂಗಳೂರು, ನಂತರ ಚೆನ್ನೈ, ನಂತರ ಆಂಧ್ರ ಪ್ರದೇಶದಲ್ಲಿ ಆಕೆ ಸಂಚರಿಸಲಿದ್ದಾಳೆ. ಸ್ನಾತಕೋತ್ತರ ಪದವೀಧರೆಯಾದ ಆಶಾ, ಕ್ರೀಡಾಪಟು‌ ಸಹ ಹೌದು. ಅಖಂಡ ಆತ್ಮವಿಶ್ವಾಸದ ಆಶಾ ತನ್ನ 3700 ಕಿ.ಮಿ.ಪಯಣದಲ್ಲಿ ಒಂದು ದಿನವೂ ತೊಂದರೆ ಆಗಿಲ್ಲ. ಸಿಕ್ಕ ಜನರು ತುಂಬಾ ಚೆನ್ನಾಗಿ ನಡೆಸಿಕೊಂಡಿದ್ದಾರೆ, ಬೆನ್ನುತಟ್ಟಿದ್ದಾರೆ ಎಂದು ‘ಉದಯವಾಣಿ’ಗೆ ತಿಳಿಸಿದರು.

Advertisement

ಅಲ್ಲದೆ ಈ ಮೂರು ತಿಂಗಳ ಸೈಕ್ಲಿಂಗ್ ನಲ್ಲಿ ಒಂದು ದಿನವೂ ಆರೋಗ್ಯ ತಪ್ಪಿಲ್ಲ. ಅತ್ಯಂತ ಫಿಟ್ ಆಗಿದ್ದೇನೆ. ದಿನದ ಪಯಣದಲ್ಲಿ ಎಲ್ಲಿ ಉಳಿಯಬೇಕು ಎಂದು ಮೊದಲೇ ನಿರ್ಧರಿಸುವುದಿಲ್ಲ. ಒಂದೊಂದು ದಿನ 100  ಕಿ.ಮೀ. ಮತ್ತೊಂದು 200 ಕಿ.ಮಿ.ತನಕ ಸೈಕ್ಲಿಂಗ್ ಮಾಡುತ್ತೇನೆ. ನನ್ನ ಪಯಣದ ಮಾಹಿತಿ ಆಯಾ ಜಿಲ್ಲೆಯ ಎಸ್ಪಿಗಳಿಗೆ ಮೊದಲೇ ಇರುತ್ತದೆ. ನಾನು ವಿಶ್ರಾಂತಿ ಪಡೆಯುವಲ್ಲಿ ಜಿಲ್ಲಾಡಳಿತ ವಸತಿ ವ್ಯವಸ್ಥೆ ಮಾಡುತ್ತದೆ. ಹಾಗೂ ಪೊಲೀಸ್ ರಕ್ಷಣೆ ಸಹ ಇರುತ್ತದೆ ಎಂದರು. ಇದುವರೆಗಿನ ಪಯಣದಲ್ಲಿ ಮಹಾರಾಷ್ಟ್ರ ತುಂಬಾ ಖುಷಿ ನೀಡಿದೆ. ಗೋವಾ ಮುಖ್ಯಮಂತ್ರಿ ತುಂಬಾ ಸರಳ. ಅವರನ್ನು ಎರಡು ಸಲ ಭೇಟಿ ಮಾಡಿದೆ ಎಂದು ಆಶಾ ಮಾಳವೀಯ ನುಡಿದರು.

ಮಹಿಳಾ ಸಬಲೀಕರಣ ಹಾಗೂ ರಕ್ಷಣೆಗೆ ಹೆಚ್ಚು ಪ್ರಾಧನ್ಯತೆ ನೀಡುವ ಕಾಲ ಪ್ರಾಪ್ತವಾಗಿದೆ. ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಸಂವಿಧಾನದ ಮೂಲಕ ಮಹಿಳೆಯರಿಗೆ ಹೆಚ್ಚು ರಕ್ಷಣೆ ನೀಡಿದರು. ಭಾರತೀಯ ಮಹಿಳೆಯರ ಬಗ್ಗೆ ಅಂಬೇಡ್ಕರ್ ನಿಲುವು ಮಹತ್ವದ್ದು ಎಂದು ಆಶಾ ಮಾಳವೀಯ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next