Advertisement

ಸೈಕಲ್‌, ನಡಿಗೆಗೆ ಜೈ ಎಂದ ಇಂಗ್ಲೆಂಡ್‌ನ‌ ವಾಹನ ಸವಾರರು

12:43 PM May 26, 2020 | sudhir |

ಲಂಡನ್‌: ಇಂಗ್ಲೆಂಡ್‌ನ‌ ವಾಹನ ಸವಾರರು ಲಾಕ್‌ಡೌನ್‌ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಅವರೀಗ ಹೆಚ್ಚು ನಡಿಗೆಯನ್ನು ಹಾಗೂ ಕಡಿಮೆ ಪ್ರಮಾಣದ ವಾಹನ ಚಾಲನೆಯನ್ನು ಇಷ್ಟಪಡುತ್ತಿದ್ದಾರೆ.

Advertisement

ಸುಮಾರು 20 ಸಾವಿರ ವಾಹನ ಸವಾರರನ್ನು ಎಎ ಸಂಸ್ಥೆ ಸರ್ವೆ ಮಾಡಿದಾಗ, ಅರ್ಧದಷ್ಟು ಜನರು ತಾವು ಹೆಚ್ಚು ನಡೆಯುವುದನ್ನು ಇಷ್ಟಪಡುತ್ತಿರುವುದಾಗಿ ತಿಳಿಸಿದ್ದಾರೆ. ಶೇ. 40ರಷ್ಟು ಜನರು ವಾಹನಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದಕ್ಕೆ ಒತ್ತು ನೀಡುವುದಾಗಿ ಹೇಳಿದ್ದಾರೆ. ಈ ಮೂಲಕ ಗಾಳಿಯ ಗುಣಮಟ್ಟ ಸುಧಾರಣೆಗೆ ಮಹತ್ವದ ಮುಂದಡಿ ಇರಿಸಿದ್ದಾರೆ. ಗಾಳಿಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲ ವರ್ತನೆಯನ್ನು ಕೈಬಿಡಲು ಶೇ. 80ರಷ್ಟು ಚಾಲಕರು ನಿರ್ಧರಿಸಿದ್ದಾರೆ.

ಕೋವಿಡ್‌ ನಿರ್ಬಂಧಗಳ ಪರಿಣಾಮ ಜನರು ಬೀದಿಗಿಳಿಯುತ್ತಿಲ್ಲ. ವಾಹನಗಳ ಸಂಚಾರವೂ ಕಡಿಮೆಯಾಗಿದೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ತಜ್ಞರು ವರದಿ ಮಾಡಿದ್ದರು.

ಕೆಲವು ಬೈಕ್‌ ಸವಾರರನ್ನು ಮಾತನಾಡಿಸಿದಾಗ, ನಾವು ನಿತ್ಯವೂ ಕಚೇರಿಗೆ ತೆರಳುವುದಕ್ಕಿಂತ ಮನೆಯಿಂದಲೇ ಕೆಲಸ ಮಾಡಲು ಇಷ್ಟಪಡುತ್ತಿದ್ದೇವೆ ಎಂದಿದ್ದಾರೆ. ಇನ್ನೂ ಹಲವರು ತಾವು ಬೈಕ್‌ಗಳ ಬದಲಿಗೆ ಸೈಕಲ್‌ಗ‌ಳನ್ನು ಬಳಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಸ್ವಲ್ಪ ದೂರದಲ್ಲಿ ಕಚೇರಿ ಇರುವವರು ನಡೆದು ಹೋಗಿ ಬರಲೂ ಅಡ್ಡಿಯಿಲ್ಲ ಎಂದಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಶುದ್ಧ ಗಾಳಿಯನ್ನು ಉಸಿರಾಡಲು ಸಾಧ್ಯವಾಗಿದ್ದು ಅವರಲ್ಲಿ ಹೊಸ ಆಶಾಭಾವ ಮೂಡಿಸಿದೆ. ರಮ್ಯ ಪ್ರಕೃತಿಯನ್ನು ಅನುಭವಿಸಲು ತಾವು ಎಷ್ಟು ದೂರ ತೆರಳಬೇಕಾಗುತ್ತದೆ ಎನ್ನುವುದನ್ನು ಚಾಲಕರು ಯೋಚಿಸಬೇಕು. ಶುದ್ಧ ಗಾಳಿಯನ್ನು ಸಂರಕ್ಷಿಸಲು ಈಗ ವಾಹನ ಸವಾರರೂ ಮುಂದಾಗಿರುವುದು ಚೇತೋಹಾರಿಯಾಗಿದೆ. ಬೈಕ್‌ಗಳಲ್ಲಿ ತೆರಳುವ ಬದಲು ನಡಿಗೆ ಅಥವಾ ಸೈಕಲ್‌ ಬಳಕೆ ಹಾಗೂ ಮನೆಯಿಂದಲೇ ಕೆಲಸ ಮಾಡಲು ಉತ್ಸುಕತೆ ತೋರಿದ್ದು ಕಂಡುಬರುತ್ತದೆ. ಗಾಳಿಯ ಗುಣಮಟ್ಟ ಹಾಗೂ ಸಂಚಾರ ಸಮಸ್ಯೆಗೂ ಇದು ಪರಿಹಾರವಾಗಬಲ್ಲದು ಎಂದು ಎಎ ಸಂಸ್ಥೆಯ ಅಧ್ಯಕ್ಷ ಎಡ್ಮಂಡ್‌ ಕಿಂಗ್‌ ವಿವರಿಸಿದರು.

Advertisement

ಇದಕ್ಕೆ ಪೂರಕವಾಗಿ ಬ್ರಿಟನ್‌ ಸರಕಾರವೂ 240 ಮಿಲಿಯನ್‌ ಪೌಂಡ್‌ ನಿಧಿಯನ್ನು ಸೈಕ್ಲಿಂಗ್‌ ಮತ್ತು ನಡಿಗೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದೆ. ಪಾದಚಾರಿಗಳಿಗೆ ಹಾಗೂ ಸೈಕಲ್‌ ಸವಾರರಿಗೆ ರಸ್ತೆಯಲ್ಲಿ ಹೆಚ್ಚು ಸ್ಥಳಾವಕಾಶ ನೀಡಲು ಇಲ್ಲಿನ ನಗರ, ಪಟ್ಟಣಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿಗೆ ಇಲಾಖೆ ಕಳೆದ ಫೆಬ್ರವರಿಯಲ್ಲಿ ಘೋಷಿಸಿದ 5 ಬಿಲಿಯನ್‌ ಪೌಂಡ್‌ ಅನುದಾನದ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ.

ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಕಚೇರಿಗಳಿಗೆ ಜನರು ಸ್ವಂತ ವಾಹನಗಳಲ್ಲೇ ತೆರಳುವುದು ಸೂಕ್ತ. ಸಾರ್ವಜನಿಕ ಸಾರಿಗೆ ಅಷ್ಟು ಸುರಕ್ಷಿತವಲ್ಲ. ಸೈಕ್ಲಿಂಗ್‌ ಅಥವಾ ನಡಿಗೆಯೂ ಪರ್ಯಾಪ್ತವಾಗಲಾರದು ಎಂದು ಸರಕಾರ ಹೇಳಿದೆ. ಹೀಗಾದರೆ, ಮತ್ತೆ ರಸ್ತೆಗಳು ವಾಹನಗಳಿಂದ ತುಂಬಿಕೊಳ್ಳಲಿವೆ.

ಎಪ್ರಿಲ್‌ ತಿಂಗಳಲ್ಲಿ ನಡೆಸಿದ ಅಧ್ಯಯನದ ವೇಳೆ, ವಾಹನಗಳು ಬೀದಿಗಿಳಿಯದ ಕಾರಣ ಗಾಳಿಯಲ್ಲಿ ಇಂಗಾಲದ ಡಯಾಕ್ಸೆ„ಡ್‌ ಪ್ರಮಾಣ ಶೇ. 17ರಷ್ಟು ಇಳಿಕೆಯಾಗಿರುವುದು ಬೆಳಕಿಗೆ ಬಂದಿತ್ತು. ಭೂಸಾರಿಗೆ ಹಾಗೂ ಕೈಗಾರಿಕೆಗಳು ಮುಚ್ಚಿದ್ದರಿಂದ ಮಾಲಿನ್ಯ ಪ್ರಮಾಣ ಶೇ. 43ರಷ್ಟು ಕುಸಿತ ಕಂಡಿತ್ತು. ಇಂಧನ ಉತ್ಪಾದನೆ ಹಾಗೂ ಬಳಕೆಯೂ ಕಡಿಮೆಯಿತ್ತು.

ಸೈಕಲ್‌ ಅಥವಾ ನಡಿಗೆ ಸಾಧ್ಯವಿಲ್ಲದಲ್ಲಿ ಸರಕಾರವೇ ಜನರಿಗೆ ಏನಾದರೂ ಪರಿಹಾರ ಸೂಚಿಸಲಿ. ಅಲ್ಲಲ್ಲಿ ಬೈಸಿಕಲ್‌ ನಿಲ್ದಾಣಗಳನ್ನು, ಉದ್ಯಾನಗಳನ್ನು ಆರಂಭಿಸಿ, ಗಾಳಿಯ ಗುಣಮಟ್ಟ ಕಾಪಾಡಲು ಸಹಕರಿಸಲಿ ಎಂದು ಸಲಹೆ ನೀಡಿದೆ.

ಇದೇ ವೇಳೆ ಹಲವು ದಿನಗಳ ಬಳಿಕ ವಾಹನಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳಿಗೂ ಸಂಸ್ಥೆ ಕೆಲವೊಂದು ಸಲಹೆಗಳನ್ನು ನೀಡಿದೆ. ವಾಹನಗಳನ್ನು ದೀರ್ಘ‌ಕಾಲ ನಿಲ್ಲಿಸಿದ್ದರಿಂದಾಗಿ ಬ್ಯಾಟರಿ ಖಾಲಿಯಾಗಿ ಅದು ಚಾಲೂ ಆಗದೇ ಇರಬಹುದು, ಟೈರ್‌ಗಳಲ್ಲಿ ಗಾಳಿ ಹೋಗಿರಬಹುದು, ಎಂಜಿನ್‌ ಆಯಿಲ್‌ ಗಟ್ಟಿಯಾಗಿರಬಹುದು, ಕೂಲೆಂಟ್‌ ಕೂಡ ಆವಿಯಾಗಿರುವ ಸಾಧ್ಯತೆ ಇದೆ. ಬ್ರೇಕ್‌ ಆಯಿಲ್‌, ಎಂಜಿನ್‌ ಆಯಿಲ್‌, ಚಕ್ರಗಳಲ್ಲಿ ಸೂಕ್ತ ಪ್ರಮಾಣದ ಗಾಳಿ ಇದೆಯೇ? ಬ್ಯಾಟರಿ ಸುಸ್ಥಿತಿಯಲ್ಲಿದೆಯೇ? ಇಟ್ಟಲ್ಲಿಯೇ ಇಲಿ ವೈರ್‌ಗಳನ್ನು ಕತ್ತರಿಸಿದೆಯೇ? ಎಂಜಿನ್‌ನಲ್ಲಿ ಏನಾದರೂ ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆಯೇ ಎನ್ನುವುದನ್ನು ಪರಿಶೀಲಿಸಿ. ಎಂಜಿನ್‌ ಚಾಲೂ ಆದರೂ ಒಂದೆರಡು ದಿನಗಳ ಕಾಲ ವಾಹನವನ್ನು ನಿಧಾನವಾಗಿ ಓಡಿಸಿ, ಪರೀಕ್ಷಿಸುವುದು ಸೂಕ್ತ. ಇಲ್ಲದಿದ್ದರೆ ಮಾರ್ಗ ಮಧ್ಯೆ ಕೈಕೊಡುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next