Advertisement

35 ದೇಶ, 30,000 ಕಿ.ಮೀ. ಸುತ್ತಾಟ ! ಕೇರಳದಿಂದ ಲಂಡನ್‌ಗೆ ಸೈಕಲ್‌ ಯಾತ್ರೆ

10:28 AM Sep 05, 2022 | Team Udayavani |

ಮಹಾನಗರ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೈಕಲ್‌ ರೈಡರ್‌ ಫಯೀಸ್‌ ಅಶ್ರಫ್‌ ಅಲಿ ಅವರು ಕೇರಳದ ತಿರುವನಂತಪುರದಿಂದ ಲಂಡನ್‌ವರೆಗೆ ಏಕಾಂಗಿ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ. ಅವರು ಶನಿವಾರ ಮಂಗಳೂರು ತಲುಪಿದ್ದು, ಇಲ್ಲಿನ ನಾಗರಿಕರು ಅವರನ್ನು ಸ್ವಾಗತಿಸಿ, ಬರಮಾಡಿಕೊಂಡರು.

Advertisement

ಫಯೀಸ್‌ ಅಶ್ರಫ್‌ ಅಲಿ ಅವರು ಅಂತಾರಾಷ್ಟ್ರೀಯ ಸೈಕಲ್‌ ರೈಡರ್‌ ಆಗಿದ್ದು, ತನ್ನ ಯಾತ್ರೆಯನ್ನು ಆಗಸ್ಟ್‌ 15ರಂದು ತಿರುವನಂತಪುರದಿಂದ ಆರಂಭಿಸಿದ್ದಾರೆ. ಒಟ್ಟು 450 ದಿನಗಳ ಸೈಕಲ್‌ ಯಾತ್ರೆ ಅವರದ್ದು. ಈ ವೇಳೆ ಎರಡು ಖಂಡ, 35 ದೇಶ ಸುತ್ತಲಿದ್ದಾರೆ. ಒಟ್ಟು 450 ದಿನಗಳಲ್ಲಿ ಸುಮಾರು 30,000 ಕಿ.ಮೀ ಯಾತ್ರೆ ಕೈಗೊಳ್ಳುವ ಗುರಿ ಹೊಂದಿದ್ದಾರೆ. ಕೇರಳ ಮೂಲಕ ಫಯೀಸ್‌ ಅವರು ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದು, ಬಾಲ್ಯದಿಂದಲೇ ಸೈಕಲ್‌ ಯಾತ್ರೆಯತ್ತ ಆಕರ್ಷಿತರಾಗಿದ್ದರು.

ವಿವಿಧ ದೇಶ ಸುತ್ತಾಟ

ಫಯೀಸ್‌ ಅವರು ಅಮೆರಿಕ ಮೂಲಕ ಸರ್ಲಾ ಡಿಸ್ಕ್ ಟ್ರಕ್ಕರ್‌ ಸೈಕಲ್‌ನಲ್ಲಿ ಯಾತ್ರೆ ಆರಂಭಿಸಿದ್ದಾರೆ. ತಿರುವನಂತಪುರದಿಂದ ಮುಂಬಯಿವರೆಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಅಲ್ಲಿಂದ ಒಮಾನ್‌ಗೆ ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಸೌದಿ ಅರೇಬಿಯ, ಕತಾರ್‌, ಬಹ್ರೈನ್‌, ಕುವೈತ್‌, ಇರಾಕ್‌, ಇರಾನ್‌, ಜಾರ್ಜಿಯಾ, ಟರ್ಕಿ ಅಲ್ಲಿಂದ ಬಲ್ಗೇರಿಯ, ರೊಮೇನಿಯಾ, ಮೊಲ್ಡೋವಾ, ಉಕ್ರೇನ್‌, ಪೋಲೆಂಡ್‌, ಜೆಕೋಸ್ಲೊವಾಕಿಯ, ಹಂಗೇರಿ, ಕ್ರೊಯೇಷಿಯಾ, ಆಸ್ಟ್ರಿಯ, ಇಟಲಿ, ಸ್ವಿಜರ್‌ಲ್ಯಾಂಡ್‌, ಜರ್ಮನಿ, ನೆದರ್‌ಲ್ಯಾಂಡ್‌, ಬೆಲ್ಜಿಯಂ, ಲಕ್ಸೆಂಬರ್ಗ್‌, ಫ್ರಾನ್ಸ್‌ ಮೂಲಕ ಎರಡು ಖಂಡಗಳನ್ನು ದಾಟಿ ಲಂಡನ್‌ ತಲುಪಲಿದ್ದಾರೆ.

ವೀಸಾ ಸಮಸ್ಯೆಯಿಂದ ಪಾಕಿಸ್ಥಾನ ಮತ್ತು ಚೀನ ದೇಶಕ್ಕೆ ಪ್ರಯಾಣ ಮಾಡುತ್ತಿಲ್ಲ. 2019ರಲ್ಲಿ ಕೇರಳದಿಂದ ಸಿಂಗಾಪುರಕ್ಕೆ ಸೈಕಲ್‌ ಯಾತ್ರೆ ಆರಂಭಿಸಿದ್ದರು. ಈ ವೇಳೆ 104 ದಿನಗಳ ಕಾಲ 8,000 ಕಿ.ಮೀ. ಪ್ರಯಾಣದಲ್ಲಿ ನೇಪಾಲ, ಬೂತಾನ್‌, ಮಯನ್ಮಾರ್‌, ಥೈಲ್ಯಾಂಡ್‌ ಮತ್ತು ಮಲೇಶಿಯಾ ದೇಶ ಸಂಚರಿಸಿದ್ದಾರೆ. ಪ್ರತೀ ರೈಡ್‌ನ‌ಲ್ಲಿಯೂ ಸಮಾಜಕ್ಕೆ ಸಂದೇಶ ನೀಡುವ ಪರಿಕಲ್ಪನೆಯೊಂದಿಗೆ ರೈಡ್‌ ಮಾಡುತ್ತಿದ್ದು, ಈ ಬಾರಿ ಹೃದಯದಿಂದ ಹೃದಯಕ್ಕೆ ಮತ್ತು ಪರಿಸರ ಸಂರಕ್ಷಣೆಯ ಸ್ಲೋಗನ್‌ ಇರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next