Advertisement
ಹೌದು. ಸೈಬರ್ ಅಪರಾಧಗಳನ್ನು ಮಟ್ಟ ಹಾಕಲು ಎಷ್ಟೇ ಕಠಿಣ ಕಾನೂನುಗಳು ಜಾರಿಗೆ ತಂದರೂ, ಏನೇ ಆಧುನಿಕ ತಂತ್ರಜ್ಞಾನ ಬಳಸಿದರೂ ಅದಕ್ಕೆ ಸವಾಲು ಎಂಬಂತೆ ರಾಜ್ಯ ದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ. ದಾಖಲಾದ ಪ್ರಕರಣಗಳ ಪೈಕಿ ಪತ್ತೆಯಾಗದ ಪ್ರಕರಣಗಳದ್ದೇ ಸಿಂಹಪಾಲು.
Related Articles
Advertisement
ಹೆಚ್ಚು: ದಾಖಲಾದ ಪ್ರಕರಣಗಳಿಗಿಂತ ಪತ್ತೆಯಾಗದ ಪ್ರಕರಣಗಳ ಸಂಖ್ಯೆಯೇ ಹೆಚ್ಚು. ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಕಳೆದ 4 ವರ್ಷಗಳಲ್ಲಿ ಸುಮಾರು ಶೇ.22ರಷ್ಟು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಬಾಕಿ ಪ್ರಕರಣಗಳ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.
ಪತ್ತೆ ಕಬ್ಬಿಣದ ಕಡಲೆ: ಸೈಬರ್ ಕಳ್ಳರು ನೆರೆಯ ಒಡಿಶಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಹೀಗೆ ದೇಶ ವಿವಿಧ ರಾಜ್ಯಗಳು ಅಥವಾ ವಿದೇಶದಲ್ಲಿ ಕುಳಿತು ಕೇವಲ ಮೊಬೈಲ್ ನಂಬರ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಕ್ಷಣಾರ್ಧದಲ್ಲಿಯೇ ಖಾತೆಯನ್ನು ಬರಿದಾಗಿಸುತ್ತಿದ್ದಾರೆ. ಅಂತಹ ರಹಸ್ಯ ಸ್ಥಳದಲ್ಲಿ ಕುಳಿತು ಅಮಾಯಕ ಜನರ ಹಣ ದೋಚುವ ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣ ಕಡಲೆಯಾಗಿದೆ. ಕೆಲವೊಮ್ಮೆ ಐಪಿ ವಿಳಾಸ ಸಿಕ್ಕರೆ, ಕೃತ್ಯ ಎಸಗಿದ ವ್ಯಕ್ತಿ ಸಿಗುವುದಿಲ್ಲ. ಆರೋಪಿ ಸಿಕ್ಕರೂ, ಆರೋಪ ಸಾಬೀತಿಗೆ ಬೇಕಾದ ಸಾಕ್ಷ್ಯ ದೊರೆಯುವುದಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಿದರೂ ಅವರಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಎಂದು ಸೈಬರ್ ಕ್ರೈಂ ಮೂಲಗಳು ಹೇಳುತ್ತವೆ.
ಒಟಿಪಿ ವಂಚನೆ: ಪೊಲೀಸರ ಪ್ರಕಾರ ಸೈಬರ್ ವಂಚನೆಯಲ್ಲಿ ಒಟಿಪಿ ವಂಚನೆ ಪ್ರಕರಣಗಳೇ ಹೆಚ್ಚಾಗಿವೆ. ಹೆಚ್ಚು ವಿದ್ಯಾವಂತರೇ ಸೈಬರ್ ವಂಚಕರು ಕರೆ ಮಾಡಿದ ಕೂಡಲೇ ತಮ್ಮ ಮೊಬೈಲ್‌ಗೆ ಬರುವ ಒಟಿಪಿ ನೀಡಿ ಲಕ್ಷ-ಲಕ್ಷ ಕಳೆದುಕೊಳ್ಳುತ್ತಿದ್ದಾರೆ. 2019ರಲ್ಲಿ 4,254 ಪ್ರಕರಣಗಳಲ್ಲಿ 67 ಪ್ರಕರಣ ಪತ್ತೆಯಾಗಿದೆ. 2020ರಲ್ಲಿ 2,545 ಪ್ರಕರಣಗಳ ಪೈಕಿ 477 ಪತ್ತೆಯಾಗಿವೆ. 2021ರಲ್ಲಿ 2130ರ ಪೈಕಿ 472, 2022ರಲ್ಲಿ 450ರಲ್ಲಿ 37 ಪತ್ತೆಯಾಗಿವೆ. ಸೋಷಿಯಲ್ ಮಿಡಿಯಾ ವಂಚನೆಯಲ್ಲಿ 2019ರಲ್ಲಿ 421ರಲ್ಲಿ 57, 2020ರಲ್ಲಿ 2095 ಪೈಕಿ 796, 2021ರಲ್ಲಿ 1335 ಪೈಕಿ 352, 2022ರಲ್ಲಿ 249ರಲ್ಲಿ 6 ಪತ್ತೆಯಾಗಿವೆ. ಇನ್ನೂ ಆನ್‌ಲೈನ್ ಫಿಶಿಂಗ್ ಕೇಸ್‌ಗಳು, 2019ರಲ್ಲಿ 2737ರಲ್ಲಿ 116, 2020ರಲ್ಲಿ 3215ರಲ್ಲಿ 633, 2021ರಲ್ಲಿ 2692ರಲ್ಲಿ 521, 2022ರಲ್ಲಿ 520ರ ಪೈಕಿ 23 ಪ್ರಕರಣಗಳು ಸಿಕ್ಕಿವೆ.
ಹಣ ಜಪ್ತಿಯೂ ಕ್ಷೀಣ: ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ ವಂಚನೆ ಹಣ ಕೋಟಿ ಲೆಕ್ಕದಲ್ಲಿ ಏರಿಕೆ ಯಾಗುತ್ತಿದೆ. ಆದರೆ, ಆರೋಪಿಗಳ ಬಂಧನದ ಜತೆ, ಅವರಿಂದ ಜಪ್ತಿ ಮಾಡಲಾದ ಹಣ ಪ್ರಮಾಣ ಶೇ.20ರಿಂದ 20ರಷ್ಟು ಮಾತ್ರ. ಕೆಲ ಸಂದರ್ಭದಲ್ಲಿ ವಂಚಕ ಎಲ್ಲ ಹಣವನ್ನು ದುರ್ಬಳಕೆ ಮಾಡಿ ಕೊಂಡಿರುತ್ತಾನೆ.
ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸಿ:
ಸೈಬರ್ ಕ್ರೈಂ ಎಂದರೆ, ಒಟಿಪಿ, ಸಾಮಾಜಿಕ ಜಾಲ ತಾಣ ವಂಚನೆ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಆನ್‌ಲೈನ್ ಶಾಪಿಂಗ್ ಮಾತ್ರವಲ್ಲ. ಸೈಬರ್ ಅಶ್ಲೀಲತೆ, ಸೈಬರ್ ಮಾನಹಾನಿ, ಜೂಜು, ಆನ್‌ಲೈನ್ ಭಯೋತ್ಪಾದನೆ, ಆನ್‌ಲೈನ್ ಗೇಮಿಂಗ್, ಬ್ಲ್ಯಾಕ್ ಮೇಲ್. ಸಾಲ ಕೊಡುವ ಸೋಗಿನಲ್ಲಿ ಸುಸ್ತಿದಾರರ ಮಾನ ಹಾನಿ ಮಾಡುವಂತಹ ಪ್ರಕರಣಗಳು. ತೀರಾ ಇತ್ತೀಚೆಗೆ ಬ್ಯಾಂಕ್, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಮಾಹಿತಿ ಕೊಡದೆಯೂ ಸೈಬರ್ ವಂಚಕರು ಹಣ ದೋಚುತ್ತಿದ್ದಾರೆ. ಗೂಗಲ್ ಸರ್ಜ್ ಎಂಜಿನ್‌ನಲ್ಲಿ ಸಿಗುವ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿದರೂ ಹಣ ಕಡಿತವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಸೇರಿ ಎಲ್ಲ ಮಾದರಿಯ ಸಾಮಾಜಿಕ ಜಾಲತಾಣ ಬಳಕೆದಾರರು ಅಪರಿಚಿತರ ಸಂದೇಶ, ಕರೆಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ.
ಸೈಬರ್ ಕ್ರೈಂ ಪತ್ತೆಗೆ ಸಾಕಷ್ಟು ತಾಂತ್ರಿಕ ತನಿಖೆ ನಡೆಸಬೇಕಿರುತ್ತದೆ. ಹೀಗಾಗಿ ಪ್ರಕರಣಗಳ ಇತ್ಯರ್ಥ ನಿಧಾನವಾಗುತ್ತಿದೆ. ಆದರೂ ಪತ್ತೆ ಕಾರ್ಯ ನಿರಂತರವಾಗಿ ಸಾಗಿದೆ. ● ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
-ಮೋಹನ್ ಭದ್ರಾವತಿ