ಬೆಂಗಳೂರು: ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವರನನ್ನು ಹುಡುಕುತ್ತಿದ್ದ ಯುವತಿಗೆ ವಿದೇಶಿ ನೌಕರನ ಸೋಗಿನಲ್ಲಿ ಸೈಬರ್ ಕಳ್ಳರು 2.33 ಲಕ್ಷ ರೂ. ವಂಚಿಸಿದ್ದಾರೆ. ಉಲ್ಲಾಳ ಉಪನಗರದ ಸುಶ್ಮಿತಾ (28) ವಂಚನೆಗೊಳಗಾದವಳು.
ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಸುಶ್ಮಿತಾ ವರನನ್ನು ಹುಡುಕುತ್ತಿದ್ದಳು. ಆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸುಶ್ಮಿತಾಗೆ ಸಂದೇಶ ಕಳುಹಿಸಿ ತನ್ನನ್ನು ರಾಜೀವ್ ಎಂದು ಪರಿಚಯಿಸಿಕೊಂಡಿದ್ದ. ತಾನು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸದ್ಯದಲ್ಲೇ ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿ ಯುವತಿಯ ವಾಟ್ಸ್‌ಆ್ಯಪ್ ನಂಬರ್ ಪಡೆದಿದ್ದ.
ಆತನ ಮಾತಿಗೆ ಮರುಳಾದ ಯುವತಿ ಆತನ ಜತೆಗೆ ಚಾಟ್ ಮಾಡುತ್ತಿದ್ದಳು. ಭಾರತಕ್ಕೆ ಬಂದ ಬಳಿಕ ವಿವಾಹದ ಕುರಿತು ಮಾತುಕತೆ ನಡೆಸೋಣ ಎಂದು ಹೇಳಿದ್ದ. ಕೆಲ ದಿನಗಳ ಹಿಂದೆ ಸುಶ್ಮಿತಾಗೆ ಕರೆ ಮಾಡಿದ ಪರಿಚಿತ ತಾನು ಭಾರತಕ್ಕೆ ಬಂದಿದ್ದು, ನನ್ನ ಬಳಿ ವಿದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಬೇಕು. ಸದ್ಯ ಟ್ರಾವೆಲಿಂಗ್, ಸೆಕ್ಯೂರಿಟಿ, ಓನರ್‌ಶಿಪ್, ಕಸ್ಟಮ್ಸ್, ಜಿಎಸ್‌ಟಿ ಚಾರ್ಜ್ ಪಾವತಿಸಲು ತುರ್ತು ಹಣದ ಅಗತ್ಯತೆ ಇದೆ ಎಂದು ಹೇಳಿದ್ದ.
ಇದನ್ನು ನಂಬಿದ ಯುವತಿ ಆತ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ- ಹಂತವಾಗಿ 2.33 ಲಕ್ಷ ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಳು. ಇದಾದ ಬಳಿಕ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇತ್ತ ಆತಂಕಗೊಂಡ ಯುವತಿ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.