Advertisement
ಇಂದು ಹ್ಯಾಕಿಂಗ್ ಎಂಬುದು ಸರ್ವೇಸಾಮಾನ್ಯವಾದರೂ 90ರ ದಶಕದಲ್ಲಿಯೇ ಜಗತ್ತಿನಲ್ಲಿ ಹ್ಯಾಕರ್ ಗಳು ಸಕ್ರಿಯರಾಗಿದ್ದರು ಎಂಬುದು ಕಟು ಸತ್ಯ. ಕೇವಲ 15 ವರ್ಷದ ಬಾಲಕ 21 ದಿನಗಳ ಕಾಲ ನಾಸಾದ ಕಾರ್ಯಚಟುವಟಿಕೆಗಳು ಸ್ಥಗಿತಗೊಳ್ಳಲು ಕಾರಣನಾಗಿದ್ದ ಎಂಬುದು ತಿಳಿದಿದೆಯೇ ? ಹೌದು, ಮುಂದೆ ಓದಿ ಅಮೆರಿಕಾದ ಪ್ರಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA (National Aeronautics and Space Administration) ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರುತ್ತಾರೆ. 1958ರಲ್ಲಿ ಸ್ಥಾಪನೆಗೊಂಡ ಇದು ಅಮೆರಿಕಾ ದೇಶದ ಅಂತರಿಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತಿದೆ.
Related Articles
Advertisement
ಅಲಾಬಾಮದಲ್ಲಿರುವ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ ನ 13 ಕಂಪ್ಯೂಟರ್ ಗಳಿಗೆ ಜೊನಾಥನ್ ಪ್ರವೇಶ ಪಡೆದಿದ್ದ. ಇಲ್ಲಿಂದಲೇ ಆತ ನಾಸಾಗೆ ಸಂಬಂಧಿಸಿದ ಡೇಟಾ ಗಳನ್ನು ಹಾಗೂ ನಾಸಾ ಸ್ವಾಮ್ಯದ ಡಾಲರ್ 1.7 ಮಿಲಿಯನ್ ಮೊತ್ತದ ಸಾಫ್ಟ್ ವೇರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾನೆ. ಇವು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭೌತಿಕ ಪರಿಸರ, ವಾಸಿಸುವ ಪ್ರದೇಶಗಳಲ್ಲಿನ ತಾಪಮಾನ ಮತ್ತು ತೇವಾಂಶದ ನಿಯಂತ್ರಣ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡಿತ್ತು.
ಇದು ನಾಸಾ ಸಂಸ್ಥೆಯ ಗಮನಕ್ಕೆ ಬಂದುದ್ದರಿಂದ, ಕೂಡಲೇ 21 ದಿನಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ 41,000 ಸಾವಿರ ಡಾಲರ್ ವ್ಯಯಿಸಿ ತನ್ನ ಕಂಪ್ಯೂಟರ್ ಗಳ ಪರಿಶೀಲನೆ ಮತ್ತು ರಿಪೇರಿ ಕಾರ್ಯಗಳನ್ನು ಕೈಗೊಂಡಿತ್ತು. ಈ ವೇಳೆ ನಾಸಾದ ರಕ್ಷಣಾ ವಿಭಾಗ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ, ಕಾರ್ಯಾಚರಣೆಗಿಳಿದ ತನಿಖಾ ತಂಡ ಜನವರಿ 26, 2000ನೇ ಇಸವಿಯಂದು ಜೇಮ್ಸ್ ಮನೆಗೆ ಪ್ರವೇಶಿಸಿ ಹ್ಯಾಕಿಂಗ್ ಕೃತ್ಯವನ್ನು ಬಯಲು ಮಾಡಿತ್ತು. ಬಳಿಕ ಜೊನಾಥನ್ ಜೇಮ್ಸ್ ಬಾಲಾಪರಾಧಯಾಗಿರುವುದರಿಂದ 7 ತಿಂಗಳ ಕಾಲ ಶಿಕ್ಷೆಗೆ ಒಳಗಾಗಿದ್ದ. ಮಾತ್ರವಲ್ಲದೆ 18 ವರ್ಷದವರೆಗೆ ಆತನ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಈ ವೇಳೆ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ಜೇಮ್ಸ್ ಮತ್ತೊಮ್ಮೆ 6 ತಿಂಗಳ ಕಾಲ ಶಿಕ್ಷೆಗೆ ಒಳಗಾಗಿದ್ದ.
ದರೋಡೆ ಅಥವಾ ಕಂಪ್ಯೂಟರ್ ಹ್ಯಾಕಿಂಗ್ ಮೂಲಕ ಮತ್ತೊಬ್ಬರ ಸೊತ್ತನ್ನು ಹಾನಿಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಯುಎಸ್ ಅಟಾರ್ನಿ ಜನರಲ್ ಜೆನೆಟ್ ರೇನೋ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ ಜೇಮ್ಸ್ ಬಾಲಾಪರಾಧಿಯಾಗಿದ್ದರಿಂದ ಆತನ ಹೆಸರು 18 ವಯಸ್ಸಿವರೆಗೂ ಅನಾಮಿಕವಾಗಿಯೇ ಉಳಿದಿತ್ತು. ಆದರೇ ಜೇಮ್ಸ್ ತಪ್ಪೊಪ್ಪಿಕೊಂಡ ನಂತರ ಕಂಪ್ಯೂಟರ್ ಅನಾಲಿಸ್ಟ್ ಆಗಿದ್ದ ಆತನ ತಂದೆ ರಾಬರ್ಟ್ ತಮ್ಮ ಮಗನ ಹೆಸರನ್ನು ಬಹಿರಂಗಗೊಳಿಸಿದ್ದರು. ಮಾತ್ರವಲ್ಲದೆ ನಾನು 20 ವರ್ಷಗಳಿಂದ ಕಂಪ್ಯೂಟರ್ ಗಳ ಜೊತೆಯೇ ಕೆಲಸ ಮಾಡುತ್ತಿದ್ದೇನೆ. ಆದರೇ ನನ್ನ ಮಗ ಮಾಡುವ ಕೆಲಸಗಳು ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಇಲ್ಲಿ ಜೇಮ್ಸ್ ಗೆ ತಾನು ಮಾಡುತ್ತಿರುವುದು ಅಪರಾಧವೆಂದು ತಿಳಿದಿರಲಿಲ್ಲ. ಕಂಪ್ಯೂಟರ್ ಕುರಿತು ಆತನಿಗಿದ್ದ ಆಸಕ್ತಿಯೇ ಆ ಮಟ್ಟಕ್ಕೆ ಕೊಂಡೊಯ್ದಿತ್ತು. ಆತ ಸುಲಭವಾಗಿಯೇ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವುದೇ ಪ್ರಯತ್ನದಲ್ಲೂ ಕೂಡ ಆತ ತೊಡಗಲಿಲ್ಲ. ಅದನ್ನೊಂದು ಆಟ ಆಡುವ ವಿಧಾನವೆಂದೇ ಆತ ಭಾವಿಸಿದ್ದ. ನಾಸಾದ ಯಾವುದೇ ಕಂಪ್ಯೂಟರ್ ಸಿಸ್ಟಂಗಳಿಗೆ ಆತ ಹಾನಿ ಮಾಡಲಿಲ್ಲ ಎಂದು ಜನಪ್ರಿಯ ಪತ್ರಿಕೆಯೊಂದು ಆ ಸಮಯದಲ್ಲಿ ವರದಿ ಮಾಡಿತ್ತು. ಕಂಪ್ಯೂಟರ್ ಭದ್ರತೆಯಲ್ಲಿ ಸಾಕಷ್ಟು ವೈಫಲ್ಯಗಳಿವೆ. ಪ್ರಯತ್ನಿಸಿದ್ದಲ್ಲಿ ಪ್ರತಿಯೊಬ್ಬರೂ ಹ್ಯಾಕ್ ಮಾಡುವ ಸಾಧ್ಯತೆಯಿದೆ. ನನ್ನಂತಹ ಕಂಪ್ಯೂಟರ್ ಉತ್ಸಾಹಿಗಳು ಬಹಳಷ್ಟಿರುತ್ತಾರೆ. ಕೌಶಲ್ಯವಿದ್ದರೆ ಮೈಕ್ರೋಸಾಫ್ಟ್ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಾಗಿರಲಿ ಬಯಸಿದ್ದನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಜೇಮ್ಸ್ ತಿಳಿಸಿದ್ದಾನೆ.
ಆದರೇ 2008ರಲ್ಲಿ ಜೇಮ್ಸ್ ಜೀವನಗಾಥೆ ಅಂತ್ಯವಾಗುತ್ತದೆ. ಆ ವೇಳೆಯಲ್ಲಿ ಪ್ರಪಂಚದಾದ್ಯಂತ ಸಾವಿರಾರು ಹ್ಯಾಕರ್ ಗಳು ರಂಗಕ್ಕಿಳಿದಿದ್ದರು. ಹಲವಾರು ಸಂಸ್ಥೆಗಳಲ್ಲಿ ಡೇಟಾಗಳು ಸೋರಿಕೆಯಾಗಿದ್ದವು. ಈ ವೇಳೆ ಜೇಮ್ಸ್ ಕೂಡ ಇತರರೊಂದಿಗೆ ಕೂಡಿಕೊಂಡು ಕ್ರೆಡಿಟ್ ಕಾರ್ಡ್ ಸೇರಿದಂತೆ ಇತರ ಮಾಹಿತಿ ಕದಿಯಲು ಸಂಚು ರೂಪಿಸಿದ್ದಾನೆ ಎಂಬ ಆರೋಪಗಳು ಮುನ್ನಲೆಗೆ ಬಂದಿದ್ದವು. ಆದರೆ ಈ ಅಪರಾಧದಲ್ಲಿ ತಾನು ಶಾಮೀಲಾಗಿಲ್ಲ ಎಂದು ವಾದಿಸುತ್ತಲೇ ಬಂದ ಜೇಮ್ಸ್ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇಂದು ಜಗತ್ತಿನ ಅತೀ ದೊಡ್ಡ ಹ್ಯಾಕಿಂಗ್ ಕೃತ್ಯ ಯಾವುದೆಂದು ಹುಡುಕಿದರೆ ಅಲ್ಲಿ ಜೊನಾಥನ್ ಪ್ರಕರಣ ಕಾಣಿಸಿಕೊಳ್ಳುತ್ತದೆ. 90ರ ದಶಕದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತಂತ್ರಜ್ಞಾನಗಳು ಅಭಿವೃದ್ದಿಯಾಗದಿದ್ದರೂ, ಸೈಬರ್ ಅಪರಾಧಗಳನ್ನು ಯಾವೆಲ್ಲಾ ರೀತಿ ಮಾಡಬಹುದೆಂಬ ವಿಚಾರಗಳು ಬೆಳಕಿಗೆ ಬಂದಿದ್ದವು. ಜೇಮ್ಸ್ ಜೈಲಿನಿಂದ ಬಿಡುಗಡೆಯಾದ ಮೇಲೂ, ಇತರೆ ಯಾವುದೇ ಸೈಬರ್ ಅಪರಾಧಗಳು ನಡೆದರೂ ಆತನ ಮೇಲೆ ಅಮೆರಿಕಾದ ಏಜೆಂಟ್ ಗಳು ಅನುಮಾನ ಪಡುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಆತ 2008, ಮೇ 18 ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ, ಜಗತ್ತಿನ ಅತೀ ದೊಡ್ಡ ಸೈಬರ್ ಅಪರಾಧದಲ್ಲಿ ಭಾಗಿಯಾದವನ ಜೀವನಗಾಥೆ ಅಂತ್ಯವಾಗುತ್ತದೆ.
*ಮಿಥುನ್ ಪಿ.ಜಿ