Advertisement

ಆಸ್ಪತ್ರೆ ಮೇಲೆ ಸೈಬರ್‌ ದಾಳಿ, ದತ್ತಾಂಶಗಳಿಗೆ ಕನ್ನ

02:56 PM Dec 01, 2021 | Team Udayavani |

ಮೈಸೂರು: ನಗರದ ಖಾಸಗಿ ಆಸ್ಪತ್ರೆಯೊಂದರ ಮೇಲೆ ಇದೆ ಮೊದಲ ಬಾರಿಗೆ ಸೈಬರ್‌ ದಾಳಿ ನಡೆಸಿ, ದತ್ತಾಂಶ ಹ್ಯಾಕ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದಾಳಿ ನಡೆಸಿದ ಸೈಬರ್‌ ಖದೀಮರು, ಆಸ್ಪತ್ರೆಯ ದತ್ತಾಂಶವನ್ನು ಹ್ಯಾಕ್‌ ಮಾಡಿ ಬಿಟ್‌ ಕಾಯಿನ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

Advertisement

ಈ ಸಂಬಂಧ ಆಸ್ಪತ್ರೆಯ ಮಾಲಿಕರು ನೀಡಿದ ದೂರಿನ ಮೇರೆಗೆ ನಗರದ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಮಾಹಿತಿ ಪಡೆದಿರುವ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಆಸ್ಪತ್ರೆಯ ಕಂಪ್ಯೂಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಇದನ್ನೂ ಓದಿ;- ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಇದು ತಾಂತ್ರಿಕ ದೋಷ ಇರಬಹುದು ಎಂಬ ಆಸ್ಪತ್ರೆಯ ಸಿಬ್ಬಂದಿ ಸುಮ್ಮನಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹ್ಯಾಕರ್‌ಗಳು ಮೆಸೇಜ್‌ ಕಳುಹಿಸಿದ್ದಾರೆ. ನಿಮ್ಮ ಆಸ್ಪತ್ರೆಯ ದತ್ತಾಂಶಗಳನ್ನು ಹ್ಯಾಕ್‌ ಮಾಡಲಾಗಿದ್ದು, ಹಣವನ್ನು ಬಿಟ್‌ ಕಾಯಿನ್‌ ರೂಪದಲ್ಲಿ ನೀಡಿದ ನಂತರಷ್ಟೇ ದತ್ತಾಂಶವನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಎಲ್ಲ ದತ್ತಾಂಶ ಹಾರ್ಡ್‌ ಡಿಸ್ಕ್ನಲ್ಲೂ ಸೇವ್‌ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

ತನಿಖೆಗೆ ತಂಡ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಅವರು, ತನಿಖೆಗೆ ಇನ್ಸ್‌ಪೆಕ್ಟರ್‌ ಶೇಖರ್‌ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ದೇಶದ ಆಸ್ಪತ್ರೆಗಳ ದತ್ತಾಂಶಗಳನ್ನು ಅಳಿಸಿ ಹಾಕಲು ಸೈಬರ್‌ ಹ್ಯಾಕರ್‌ಗಳು ಪ್ರಯತ್ನ ನಡೆಸುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ “ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್ ಇಂಡಿಯಾ’ ವರ್ಷದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿಯೇ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ಆಸ್ಪತ್ರೆಗಳು ಸೈಬರ್‌ ದಾಳಿಯ ಭೀತಿಯನ್ನು ಎದುರಿಸಿದ್ದನ್ನು ಸ್ಮರಿಸಬಹುದು.

“ನಗರದ ಆಸ್ಪತ್ರೆಯೊಂದರ ಮೇಲೆ ಸೈಬರ್‌ ದಾಳಿ ನಡೆದಿರುವುದು ಇದೇ ಮೊದಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.” ಡಾ. ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ.

Advertisement

Udayavani is now on Telegram. Click here to join our channel and stay updated with the latest news.

Next