Advertisement

ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಸುಧೀರ್‌ಗೆ ಚಿನ್ನ; ಭಾರತಕ್ಕೆ ಈ ಬಾರಿ 6ನೇ ಬಂಗಾರ

09:21 PM Aug 05, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಗುರುವಾರ ತಡರಾತ್ರಿ ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಒಲಿಯಿತು.

Advertisement

ಹರ್ಯಾಣದ ಸುಧೀರ್‌ ಅವರು ಪುರುಷರ ಹೆವಿವೇಟ್‌ನಲ್ಲಿ ಚಿನ್ನದ ಸಿಂಚನ ಮಾಡಿದರು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸುಧೀರ್‌, ಕಾಮನ್‌ವೆಲ್ತ್‌ನಲ್ಲಿ ಅದನ್ನು ಬಂಗಾರದ ಮಟ್ಟಕ್ಕೆ ಏರಿಸಿದರು. ಇದು ಭಾರತಕ್ಕೆ ಈ ಬಾರಿ ಬಂದ 6ನೇ ಬಂಗಾರದ ಪದಕ.

ಬೇಸರದ ಸಂಗತಿಯೆಂದರೆ ಕರ್ನಾಟಕದ ಮಹಿಳಾ ಸ್ಪರ್ಧಿ ಸಕೀನಾ ಖಾತುನ್‌ ಪವರ್‌ಲಿಫ್ಟಿಂಗ್‌ನಲ್ಲಿ ವಿಫ‌ಲರಾಗಿದ್ದು.

ಸುಧೀರ್‌ ತಮ್ಮ ಮೊದಲ ಯತ್ನದಲ್ಲಿ 208 ಕೆಜಿ ಎತ್ತಿದ್ದರು. 2ನೇ ಯತ್ನದಲ್ಲಿ ಅದನ್ನು 212 ಕೆಜಿಗೆ ವಿಸ್ತರಿಸಿದರು. ಮೂರನೇ ಯತ್ನದಲ್ಲಿ ಅವರು 217 ಕೆಜಿ ಎತ್ತಲು ಹೋಗಿ ವಿಫ‌ಲರಾದರು. ಇಷ್ಟರಲ್ಲಾಗಲೇ ಅವರು 134.5 ಅಂಕಗಳನ್ನು ಗಳಿಸಿಯಾಗಿತ್ತು.

ಜೊತೆಗೆ ಗೇಮ್ಸ್‌ನ ಈ ವಿಭಾಗದಲ್ಲಿ ಗರಿಷ್ಠ ತೂಕ ಎತ್ತಿದ ದಾಖಲೆಯನ್ನೂ ನಿರ್ಮಿಸಿದರು. ಹಾಗಾಗಿ ಅವರ ಚಿನ್ನದ ಪದಕ ಆಗಲೇ ಖಚಿತವಾಗಿತ್ತು. ಇಲ್ಲಿ ಕ್ರಿಸ್ಟಿಯನ್‌ ಬೆಳ್ಳಿ, ಮಿಕ್ಕಿ ಯೂಲ್‌ ಕಂಚಿನ ಪದಕ ಗೆದ್ದರು.

Advertisement

4ನೇ ವರ್ಷದಲ್ಲೇ ಪೋಲಿಯೊ
ಸುಧೀರ್‌ ಹಿನ್ನೆಲೆ ಇಲ್ಲಿ ಮುಖ್ಯವಾಗುತ್ತದೆ. ಹರ್ಯಾಣದ ಸೋನಿಪತ್‌ನವರಾದ ಅವರಿಗೆ ಈಗ 27 ವರ್ಷ. ಅವರಿಗೆ ಕೇವಲ 4 ವರ್ಷವಾಗಿದ್ದಾಗ ವಿಪರೀತ ಜ್ವರ ಬಂದು ಅಂಗವೈಕಲ್ಯಕ್ಕೆ ತುತ್ತಾದರು. ಆದರೆ ಅವರಲ್ಲಿ ಕ್ರೀಡಾಪಟುವಾಗಬೇಕೆಂಬ ಆಸೆ ಬಾಲ್ಯದಿಂದಲೇ ಇತ್ತು. ಹಾಗಾಗಿ ತಮ್ಮ ಕಠಿಣಯತ್ನವನ್ನು ಮುಂದುವರಿಸಿದರು. 2013ರಲ್ಲಿ ಅವರು ಕ್ರೀಡಾಜೀವನವನ್ನು ಶುರು ಮಾಡಿದರು. 2016ರಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ ಬಂಗಾರವನ್ನು ಗೆದ್ದರು. 2018ರ ಏಷ್ಯಾ ಪ್ಯಾರಾ ಗೇಮ್ಸ್‌ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಕಾಲಿಟ್ಟರು. ಅಲ್ಲಿ ಕಂಚಿನ ಪದಕವನ್ನೇ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next