Advertisement

400 ಮೀ.: ಅನಾಸ್‌ಗೆ ತಪ್ಪಿದ ಕಂಚು

07:30 AM Apr 11, 2018 | Team Udayavani |

ಗೋಲ್ಡ್‌ಕೋಸ್ಟ್‌: ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯ 400 ಮೀ.ನಲ್ಲಿ ಮುಹಮ್ಮದ್‌ ಅನಾಸ್‌ ರಾಷ್ಟ್ರೀಯ ದಾಖಲೆಗೈದ ಸಾಧನೆಗೈದರೂ ಸ್ವಲ್ಪದರಲ್ಲಿ ಕಂಚಿನ ಪದಕ ಗೆಲ್ಲಲು ವಿಫ‌ಲರಾದರು. 

Advertisement

ಅನಾಸ್‌ 45.31 ಸೆ.ನಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ಆದರೆ ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ ಕೂಟದಲ್ಲಿ ನಿರ್ಮಿಸಿದ ತನ್ನದೇ ರಾಷ್ಟ್ರೀಯ ದಾಖಲೆ (45.32 ಸೆ.) ಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. 1958ರಲ್ಲಿ ಲೆಜೆಂಡರಿ ಮಿಲ್ಖಾ ಸಿಂಗ್‌ ಬಳಿಕ ಗೇಮ್ಸ್‌ನ 400 ಮೀ. ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಆ್ಯತ್ಲೀಟ್‌ ಎಂಬ ಗೌರವಕ್ಕೆ ಅನಾಸ್‌ ಪಾತ್ರರಾಗಿದ್ದಾರೆ. 

ಈ ಸ್ಪರ್ಧೆಯಲ್ಲಿ ಐಸಾಕ್‌ ಮಕ್ವಾಲ ಚಿನ್ನ ಗೆದ್ದರೆ ಬಬೊಲೋಕಿ ತೆಬೆ ಬೆಳ್ಳಿ ಮತ್ತು ಜವೋನ್‌ ಫ್ರಾನ್ಸಿಸ್‌ ಕಂಚು ಗೆದ್ದಿದ್ದಾರೆ.
ಹಿಮಾದಾಸ್‌ ಫೈನಲಿಗೆ ಅಮೋಘ ನಿರ್ವಹಣೆ ನೀಡಿದ ಭಾರತದ ಹಿಮಾದಾಸ್‌ ವನಿತೆಯರ 400 ಮೀ.ನಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಫೈನಲಿಗೇರಿದ್ದಾರೆ. ಸೆಮಿಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಅವರು ಅಂತಿಮ ಎಂಟು ಮಂದಿಯ ಫೈನಲ್‌ ಓಟಗಾರರಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಅಚ್ಚರಿಯಲ್ಲಿ ಮುಳುಗಿಸಿದರು. 51.53 ಸೆ.ನಲ್ಲಿ ಗುರಿ ತಲುಪುವ ಮೂಲಕ ಅವರು ತನ್ನ ವೈಯಕ್ತಿಕ ನಿರ್ವಹಣೆಯನ್ನು 0.44ರಿಂದ ಉತ್ತಮಪಡಿಸಿಕೊಂಡರು.

ಯೊಹಾನ್‌ ಬ್ಲೇಕ್‌ಗೆ ಆಘಾತ
ಗೇಮ್ಸ್‌ನ ಪುರುಷರ 100 ಮೀ. ಓಟದಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದ ಜಮೈಕಾದ ಯೊಹಾನ್‌ ಬ್ಲೇಕ್‌ಗೆ ದಕ್ಷಿಣ ಆಫ್ರಿಕಾದ ಸಿಂಬೈನ್‌ ಆಘಾತವಿಕ್ಕಿದ್ದಾರೆ. ಲೇನ್‌ 7ರಲ್ಲಿ ಓಡಿದ ಸಿಂಬೈನ್‌ 10.03 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆಲ್ಲುವ ಮೂಲಕ ಬ್ಲೇಕ್‌ಗೆ ಚಿನ್ನ ನಿರಾಕರಿಸಿದರು. ಇದು ಈ ವರ್ಷದ ಎರಡನೇ ಅತೀ ವೇಗದ ಓಟವಾಗಿದೆ. 
ಫೈನಲ್‌ ತಲುಪುವ ವೇಳೆ ಅತೀವೇಗದ ಓಟಗಾರರಾಗಿದ್ದ ಬ್ಲೇಕ್‌ 10.19 ಸೆ.ನೊಂದಿಗೆ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟರು. ದಕ್ಷಿಣ ಆಫ್ರಿಕಾದ ಹೆನ್ರಿಕೊ ಬ್ರುಯಿಂಟೀಸ್‌ ಬೆಳ್ಳಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next