ಗೋಲ್ಡ್‌ಕೋಸ್ಟ್: ಭಾರತದ ಟೇಬಕ್ ಟೆನಿಸ್ ತಾರೆ ಮಣಿಕಾ ಬಾತ್ರಾ ಗೋಲ್ಡ್‌ಕೋಸ್ಟ್‌ನಲ್ಲಿ ನೂತನ ಇತಿಹಾಸ ನಿರ್ಮಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ವನಿತಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಪ್ರಥಮ ಚಿನ್ನದ ಪದಕವನ್ನು ತಂದಿತ್ತ ಸಾಧಕಿಯಾಗಿ ಮೂಡಿಬಂದಿದ್ದಾರೆ.
ಶನಿವಾರದ ಟಿಟಿ ಸ್ಪರ್ಧೆಗಳಲ್ಲಿ ಭಾರತ ಇನ್ನೂ 2 ಪದಕವನ್ನು ತನ್ನದಾಗಿಸಿಕೊಂಡಿತು. ಮಿಕ್ಸೆಡ್ ಡಬಲ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್-ಸೌರವ್ ಗೋಸಲ್ ಬೆಳ್ಳಿ, ಪುರುಷರ ಡಬಲ್ಸ್‌ನಲ್ಲಿ ಹರ್ಮೀತ್ ದೇಸಾಯಿ-ಸನಿಲ್ ಶೆಟ್ಟಿ ಕಂಚಿನ ಪದಕ ಜಯಿಸಿದರು.
ಮೌಮಾ ದಾಸ್ ಜತೆಗೂಡಿ ದೇಶಕ್ಕೆ ಮೊದಲ ವನಿತಾ ಡಬಲ್ಸ್ ಬೆಳ್ಳಿ ಪದಕ ತಂದಿತ್ತಿದ್ದ ಮಣಿಕಾ ಬಾತ್ರಾ, ಇದಕ್ಕೂ ಮುನ್ನ ವನಿತಾ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.ಶನಿವಾರದ ಸಿಂಗಲ್ಸ್ ಫೈನಲ್‌ನಲ್ಲಿ ಮಣಿಕಾ ಬಾತ್ರಾ ಸಿಂಗಾಪುರದ ಯು ಮೆಂಗ್ಯು ಅವರನ್ನು 4-0 ಅಂತರದಿಂದ ಹಿಮ್ಮೆಟ್ಟಿಸಿದರು (11-7, 11-6, 11-2, 11-7).ಮಣಿಕಾ 16ರ ಸುತ್ತಿನಲ್ಲಿ ಆಸ್ಟ್ರೇಲಿಯದ ಟ್ರೇಸಿ ಫೆಂಗ್ ಅವರನ್ನು ಸೋಲಿಸಿದರೆ, ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರದ ಯಿಹಾನ್ ಝೂ ಅವರಿಗೆ ಆಘಾತವಿಕ್ಕಿದರು. ಸೆಮಿಫೈನಲ್‌ನಲ್ಲಿ ಸಿಂಗಾಪುರದ ಟಿಯಾನ್‌ವೆಲ್ ಫೆಂಗ್ ಓಟಕ್ಕೆ ಬ್ರೇಕ್ ಹಾಕಿದರು.
ಪುರುಷರ ಡಬಲ್ಸ್: ಬೆಳ್ಳಿ, ಕಂಚು
ಪುರುಷರ ಡಬಲ್ಸ್‌ನಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿತು. ಬೆಳ್ಳಿ ಪದಕ ಅಚಂತ ಶರತ್ ಕಮಲ್-ಜಿ. ಸತಿಯನ್ ಜೋಡಿಯ ಪಾಲಾಯಿತು. ಹರ್ಮೀತ್ ದೇಸಾಯಿ-ಸನಿಲ್ ಶೆಟ್ಟಿ ಸಿಂಗಾಪುರದ ಪಾಂಗ್ ವ್ಯೂ ಎನ್ ಕಿಯೋನ್-ಪೋಹ್ ಶಾವೊ ಫೆಂಗ್ ಇಥಾನ್ ವಿರುದ್ಧ ಗೆದ್ದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.