Advertisement

ವನಿತಾ ಹಾಕಿ: ಒಲಿಂಪಿಕ್‌ ಚಾಂಪಿಯನ್‌ ಇಂಗ್ಲೆಂಡಿಗೆ ಆಘಾತವಿಕ್ಕಿದ ಭಾರತ

06:30 AM Apr 09, 2018 | |

ಗೋಲ್ಡ್‌ಕೋಸ್ಟ್‌: ಒಲಿಂಪಿಕ್‌ ಹಾಕಿ ಚಾಂಪಿಯನ್‌ ಖ್ಯಾತಿಯ ಇಂಗ್ಲೆಂಡ್‌ ತಂಡವನ್ನು 2-1 ಗೋಲುಗಳಿಂದ ಉರುಳಿಸಿದ ಭಾರತದ ವನಿತೆಯರು ಅಸಾಮಾನ್ಯ ಸಾಧನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ರವಿವಾರ ನಡೆದ “ಎ’ ವಿಭಾಗದ ಮುಖಾಮುಖೀಯಲ್ಲಿ ಹಿನ್ನಡೆಯ ಬಳಿಕ ಇಂಗ್ಲೆಂಡಿನ ಮೇಲೆರಗಿ ಹೋಗುವ ಮೂಲಕ ರಾಣಿ ರಾಮ್‌ಪಾಲ್‌ ಪಡೆ ಪರಾಕ್ರಮ ಮೆರೆಯಿತು.

Advertisement

ಕಳೆದೆರಡೂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 5ನೇ ಸ್ಥಾನಕ್ಕೆ ಸಮಾಧಾನಪಟ್ಟಿದ್ದ ಭಾರತ ವನಿತೆಯರೀಗ ಗೋಲ್ಡ್‌ಕೋಸ್ಟ್‌ನಲ್ಲಿ ಸೆಮಿಫೈನಲ್‌ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. “ಎ’ ವಿಭಾಗದ ಅಂಕಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್‌ ಮೊದಲ ಸ್ಥಾನ ಅಲಂಕರಿಸಿದೆ.

ಇದು ಭಾರತಕ್ಕೆ ಒಲಿದ ಸತತ 2ನೇ ಜಯ. ಹಿಂದಿನ ಪಂದ್ಯದಲ್ಲಿ ಮಲೇಶ್ಯವನ್ನು 4-1 ಗೋಲುಗಳಿಂದ ಮಣಿಸಿತ್ತು. ಮೊದಲ ಮುಖಾಮುಖೀಯಲ್ಲಿ ವೇಲ್ಸ್‌ಗೆ 2-3ರಿಂದ ಶರಣಾಗಿತ್ತು.

35ನೇ ಸೆಕೆಂಡ್‌ನ‌ಲ್ಲೇ ಗೋಲ್‌!
ಪಂದ್ಯದ ಕೇವಲ 35ನೇ ಸೆಕೆಂಡ್‌ನ‌ಲ್ಲೇ ನಾಯಕಿ ಅಲೆಕ್ಸಾಂಡ್ರಾ ಡಾನ್ಸನ್‌ ಮೂಲಕ ಗೋಲಿನ ಖಾತೆಯನ್ನು ತೆರೆದ ಇಂಗ್ಲೆಂಡ್‌ ಭಾರತದ ಮೇಲೆ ಒತ್ತಡ ಹೇರಲಾರಂಭಿಸಿತು. 42ನೇ ನಿಮಿಷದ ತನಕವೂ ಇಂಗ್ಲೆಂಡ್‌ ಈ ಮೇಲುಗೈ ಉಳಿಸಿಕೊಂಡಿತ್ತು. ಆಗ ಗುರ್ಜಿತ್‌ ಕೌರ್‌ ಭಾರತದ ಖಾತೆ ತೆರೆದರು. ಪಂದ್ಯ ಸಮಬಲಕ್ಕೆ ಬಂತು. 48ನೇ ನಿಮಿಷದಲ್ಲಿ ನವನೀತ್‌ ಕೌರ್‌ ಇನ್ನೊಂದು ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು.

“ನಾವು ಇಂಗ್ಲೆಂಡನ್ನು ಸೋಲಿಸಿದ್ದು ಇದೇ ಮೊದಲು. ಇದು ಒಲಿಂಪಿಕ್‌ ಚಾಂಪಿಯನ್‌ ತಂಡದ ವಿರುದ್ಧ ಸಾಧಿಸಿದ ಜಯವಾದ್ದರಿಂದ ಸಂತಸ ಸಹಜವಾಗಿಯೇ ಹೆಚ್ಚಿದೆ. ನಮ್ಮ ಪಾಲಿಗೆ ಇದೊಂದು ವಿಶೇಷ ಕ್ಷಣ, ವಿಶಿಷ್ಟ ಸಾಧನೆ. ಇಂಗ್ಲೆಂಡ್‌ ವಿರುದ್ಧ ಆಡುವಾಗ ನಮಗೆ ಯಾವತ್ತೂ ಅವಕಾಶ ಕಡಿಮೆ ಇರುತ್ತದೆ. ಇಂದು ನಮ್ಮ ದಿನವಾಗಿತ್ತು…’ ಎಂದು ನಾಯಕಿ ರಾಣಿ ರಾಮ್‌ಪಾಲ್‌ ಹೇಳಿದರು.

Advertisement

ಒಲಿಂಪಿಕ್‌ ಚಾಂಪಿಯನ್‌ ತಂಡವೊಂದರ ವಿರುದ್ಧ ಗೋಲು ಬಾರಿಸಿದ್ದು ತನ್ನ ಬದುಕಿನ ಬಹು ದೊಡ್ಡ ಕ್ಷಣ ಎಂಬುದು ನವನೀತ್‌ ಕೌರ್‌ ಅವರ ಸಂಭ್ರಮದ ನುಡಿಗಳು.”ನಾವು ನಮ್ಮ ಶ್ರೇಷ್ಠ ಆಟವನ್ನಾಡಲಿಲ್ಲ.ಮ ಪಂದ್ಯದ ಶ್ರೇಯವೆಲ್ಲ ಭಾರತಕ್ಕೆ ಸಲ್ಲಬೇಕು’ ಎಂಬುದಾಗಿ ಇಂಗ್ಲೆಂಡ್‌ ನಾಯಕಿ ಅಲೆಕ್ಸಾಂಡ್ರಾ ಡಾನ್ಸನ್‌ ಹೇಳಿದರು.

ನಿಕ್ಕಿ ಪ್ರಧಾನ್‌ಗೆ ಏಟು
ಪಂದ್ಯದ ವೇಳೆ ಭಾರತದ ಮಿಡ್‌ ಫೀಲ್ಡರ್‌ ನಿಕ್ಕಿ ಪ್ರಧಾನ್‌ ಎದುರಾಳಿ ಆಕ್ರಮಣವನ್ನು ತಡೆಯುವ ವೇಳೆ ಮುಖಕ್ಕೆ ಏಟು ಅನುಭವಿಸಬೇಕಾಯಿತು. ಬಾಯಿಯಿಂದ ರಕ್ತ ಸುರಿಯಲಾರಂಭಿಸಿದ್ದರಿಂದ ಕೂಡಲೇ ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next