Advertisement

ಬಾರೋ ಸಾಧಕರ ಕೇರಿಗೆ : ಭೂತಗನ್ನಡಿ ಕಲಿಸಿದ ಪಾಠ

07:42 PM Aug 25, 2020 | Suhan S |

ಹುಡುಗ ಚೂಟಿ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ, ಸದಾ ಒಂದಿಲ್ಲೊಂದು ಕೆಲಸ- ಕಿತಾಪತಿಗಳಲ್ಲಿ ಮುಳುಗಿಯೇ ಇರುವ ತುಂಟ. ಹಾಗೆಂದು ಓದಿನಲ್ಲೇನೂ ಹಿಂದಿರಲಿಲ್ಲ. ಒಮ್ಮೆ ಓದಿದ ಸಂಗತಿ ಅವನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿತ್ತು. ಶಾಲೆಯಲ್ಲಿ ಸಹಪಾಠಿಗಳು ಪುಸ್ತಕದ ಮೊದಲ ಪುಟ ಮುಗಿಸುವಷ್ಟರಲ್ಲಿ, ಈತ ಕೊನೆಯ ಅಧ್ಯಾಯದ ಲೆಕ್ಕಗಳನ್ನೂ ಮಾಡಿಯಾಗಿರುತ್ತಿತ್ತು. ಇದೆಲ್ಲ ಸರಿ, ಆದರೆ ಹುಡುಗನಿಗೆ ಸದಾ ಚಡಪಡಿಕೆ. ಯಾವೊಂದು ವಿಷಯದಲ್ಲೂ ದೀರ್ಘ‌ಕಾಲ ನಿಲ್ಲದ ಏಕಾಗ್ರತೆ. ಒಂದು ಕೆಲಸ ಪ್ರಾರಂಭಿಸಿದರೆ ಸಾಕು, ಅದರ ನಡುವಿನಲ್ಲಿದ್ದಾಗಲೇ ಇನ್ನೊಂದಕ್ಕೆ ಜಿಗಿಯುತ್ತಿದ್ದ.

Advertisement

ಯಾವುದನ್ನೂ ಪೂರ್ಣಗೊಳಿಸಲಾಗದ ಅಸಮರ್ಥ ಎಂಬುದಕ್ಕಿಂತ, ಎಲ್ಲದರ ಬಗ್ಗೆಯೂ ಅತ್ಯಾಸಕ್ತನಾಗಿದ್ದ ಜಿಜ್ಞಾಸುವಾಗಿದ್ದುದೇ ಅದಕ್ಕೆ ಕಾರಣ. ಶಾಲೆಯಲ್ಲಿ ಮಾಸ್ತರರಾಗಿದ್ದ ತಂದೆಗೆ, ಮಗನ ಈ ಸ್ವಭಾವ ತಿಳಿಯದ್ದೇನಲ್ಲ. ಇವನನ್ನು ಹೀಗೇ ಬಿಟ್ಟರೆ, ಇವನ ಶಕ್ತಿ- ಸಾಮರ್ಥ್ಯಗಳೆಲ್ಲ ಹತ್ತುಕಡೆ ಹರಿದುಹಂಚಿಹೋಗಿ, ಕೊನೆಗೆ ಈತ ಜ್ಯಾಕ್‌ ಆಫ್ ಆಲ್, ಮಾಸ್ಟರ್‌ ಆಫ್ ನನ್‌ ಆಗಬಹುದು ಎಂದು ತೋರಿತವರಿಗೆ. ಒಂದು ದಿನ, ಚೆನ್ನಾಗಿ ಬಿಸಿಲು ಕಾಯುತ್ತಿದ್ದ ಹಗಲಿನಲ್ಲಿ ಅವರು ತನ್ನ ಮಗನನ್ನು ಮನೆಯಂಗಳಕ್ಕೆ ಕರೆತಂದರು. ನಿನಗೊಂದು ವಿಷಯ ತೋರಿಸುತ್ತೇನೆ ಎಂದು ಹೇಳಿ ತನ್ನ ಕಿಸೆಯಿಂದ ಒಂದು ಕಾಗದವನ್ನು ತೆಗೆದು, ಅದನ್ನು ಬಿಡಿಸಿ ಹಿಡಿದರು. ನಂತರ ಅದರ ಮೇಲೆ ಒಂದು ಭೂತಗನ್ನಡಿಯನ್ನು ಹಿಡಿದು ಅತ್ತ ಇತ್ತ ಆಡಿಸಿದರು. ಏನಾದರೂ ಗಮನಿಸಿದೆಯಾ? ಪ್ರಶ್ನಿಸಿದರು. ಏನು ಬದಲಾವಣೆ ಆಯ್ತು? ಏನೂ ಆಗಿಲ್ಲ. ಕಾಗದದ ಮೇಲೆ ಆ ಕನ್ನಡಿಯನ್ನ ಆಡಿಸ್ತಾ ಇದ್ದೀರಿ ಅಷ್ಟೆ ಎಂದ ಹುಡುಗ. ತಂದೆ ಈಗ ಭೂತಗನ್ನಡಿಯನ್ನು ಅತ್ತಿತ್ತ ಸರಿಸುವುದನ್ನು ನಿಲ್ಲಿಸಿ ಕಾಗದದ ಒಂದೇ ಭಾಗದಲ್ಲಿ ಸ್ಥಿರವಾಗಿ ನಿಲ್ಲಿಸಿ ಹಿಡಿದರು. ಕನ್ನಡಿಯ ಕೆಳಗಿದ್ದ ಕಾಗದ ಹೊಳೆಯಿತು.

ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ಹಾಗೆ ಹುಟ್ಟಿದ ಬೆಂಕಿ ಜ್ವಾಲೆಯಾಗಿ ಬೆಳಗಿ, ಕೊನೆಗೆ ಕಾಗದವನ್ನು ಸುಟ್ಟಿತು. ನೋಡಿದೆಯಾ? ನನ್ನ ಕೈಯಲ್ಲಿ ಕಾಗದ, ಕನ್ನಡಿ ಎರಡೂ ಇದ್ದವು. ಕನ್ನಡಿಯನ್ನು ಅತ್ತಿತ್ತ ಆಡಿಸುತ್ತಿದ್ದಾಗ ಕಾಗದದ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಆದರೆ ಒಂದೇ ಕಡೆ ಸ್ಥಿರವಾಗಿ ನಿಲ್ಲಿಸಿ ಬೆಳಕನ್ನು ಕೇಂದ್ರೀಕರಿಸಿದಾಗ ಮಾತ್ರ ಆ ಕಿರಣಗಳೆಲ್ಲ ಒತ್ತಾಗಿಬಂದು ಬೆಂಕಿ ಹುಟ್ಟಿಕೊಂಡಿತು. ಬೆಂಕಿಯನ್ನು ಹುಟ್ಟಿಸುವ ಸಾಮರ್ಥ್ಯ ಕನ್ನಡಿಗೆ ಇದೆ ಎಂದು ತಿಳಿಯುವುದು ಅದನ್ನು ಸ್ಥಿರವಾಗಿ ನಿಲ್ಲಿಸಿದಾಗ ಮಾತ್ರ. ಯಾವುದೇ ಕೆಲಸ ಸಾಧಿಸಬೇಕಾದರೆ, ಮನಸ್ಸು ಕೂಡ ಈ ಕನ್ನಡಿಯಂತೆ ಸ್ಥಿರವಾಗಿರಬೇಕು ಎಂದರು ತಂದೆ.

* * *

ಅವರು ಅಂದು ಕಲಿಸಿದ ಆ ಬಹುಮುಖ್ಯ ಭೂತಗನ್ನಡಿಯ ಪಾಠ, ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ನೆನಪಿಸಿಕೊಂಡರು ಡಾ. ಸಿ.ವಿ. ರಾಮನ್‌, ನೊಬೆಲ್‌ ಪ್ರಶಸ್ತಿ ಪಡೆದ ನಂತರ ನಡೆದ ಒಂದು ಅಭಿನಂದನೆ ಕಾರ್ಯಕ್ರಮದಲ್ಲಿ.­

Advertisement
Advertisement

Udayavani is now on Telegram. Click here to join our channel and stay updated with the latest news.

Next