ಬೆಂಗಳೂರು: ರಾಜ್ಯಾದ್ಯಂತ ದನ ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಂಡಿರುವ ಚರ್ಮ ಗಂಟು ರೋಗ ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಈವರೆಗೆ 5,865 ಜಾನುವಾರುಗಳು ಮೃತಪಟ್ಟಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚರ್ಮಗಂಟು ರೋಗವು ಮುಖ್ಯವಾಗಿ ಸೊಳ್ಳೆ, ಕಚ್ಚುವ ನೊಣ, ಉಣ್ಣೆ ಇತ್ಯಾದಿಗಳಿಂದ ಹರಡುತ್ತದೆ. ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದರ ಜೊತೆಗೆ ಸೊಳ್ಳೆ, ಕೀಟಗಳ ಹಾಗೂ ನೊಣಗಳ ನಿಯಂತ್ರಣ ಮಾಡುವುದು ತೀರಾ ಅವಶ್ಯಕವಾಗಿದೆ.
ಆದ್ದರಿಂದ ಜಾನುವಾರುಗಳಲ್ಲಿ ಚರ್ಮಗಂಟು ರೋಗವನ್ನು ತಡೆಗಟ್ಟಲು ನೊಣ, ಸೊಳ್ಳೆಗಳ ಮತ್ತು ಕಚ್ಚುವ ಕೀಟಗಳ ನಿಯಂತ್ರಣಕ್ಕಾಗಿ ಗ್ರಾಮಗಳಲ್ಲಿನ ಚೌಗು ಪ್ರದೇಶಗಳಲ್ಲಿ, ರೈತರ ಜಾನುವಾರುಗಳ ಕೊಟ್ಟಿಗೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕೀಟ ನಾಶಕಗಳನ್ನು ಸಿಂಪಡಿಸುವುದು ಸೇರಿದಂತೆ ಅಗತ್ಯ ಎಲ್ಲ ಕ್ರಮಗಳನ್ನು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳಲ್ಲಿ ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸುತ್ತೋಲೆ ಹೊರಡಿಸಿದ್ದಾರೆ.