Advertisement

ದ್ವೀಪದ ಊರಿಗೆ ಶಾಪವಾದ ನದಿ ಸಂಪರ್ಕ!

11:46 PM Jun 06, 2020 | Sriram |

ವಿಶೇಷ ವರದಿ-ಬೆಳ್ತಂಗಡಿ: ನಾಗರಿಕತೆ ಎಷ್ಟೇ ಮುಂದುವರಿದಿದ್ದರೂ ಸೌಲಭ್ಯಗಳು ಮಾತ್ರ ಪಟ್ಟಣ ವ್ಯಾಪ್ತಿಗಷ್ಟೇ ಸೀಮಿತ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳೇ ಸಾಕ್ಷಿ.

Advertisement

ತಾಲೂಕಿನ ನೆರಿಯ ಗ್ರಾಮದ ಪುಲ್ಲಾಜೆ ಪ್ರದೇಶದ ಸುಮಾರು 65 ಕುಟುಂಬಗಳು ಪ್ರತಿ ಮಳೆಗಾಲಕ್ಕೂ ಅಗತ್ಯ ಆವಶ್ಯಕತೆ ಪೂರೈಸಲು ನರಕ ಯಾತನೆ ಅನುಭವಿಸುತ್ತಿವೆ. ಶಾಸಕ ಹರೀಶ್‌ ಪೂಂಜ 1 ಕೋ.ರೂ. ಅನುದಾನ ಮೀಸಲಿರಿಸಿದ್ದು, ಈ ವರ್ಷ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಇನ್ನೇನು ಕಾಮಗಾರಿ ಆರಂಭಿಸುವಷ್ಟರಲ್ಲಿ ಕೋವಿಡ್-19 ಲಾಕ್‌ಡೌನ್‌ ಅಡಕಾಯಿಸಿತ್ತು. ಈ ವರ್ಷ ವಾದರೂ ಸೇತುವೆ ನಿರ್ಮಾಣದ ತವಕದಲ್ಲಿದ್ದ ಮಂದಿಗೆ ನಿರಾಸೆ ಮೂಡಿಸಿದೆ. ಆದ್ದರಿಂದ ಈ ಬಾರಿಯೂ ಸಂಚಾರ ದುಸ್ತರವಾಗಲಿದೆ.

ಹಗ್ಗದಲ್ಲಿ ಜೀವ; ತಪ್ಪದ ವನವಾಸ
ಬೆಳ್ತಂಗಡಿಯಿಂದ 35 ಕಿ.ಮೀ. ದೂರವಿರುವ ನೆರಿಯ ಗ್ರಾಮದ ಅಣಿಯೂರಿನಿಂದ ಸುಮಾರು 8 ಕಿ.ಮೀ.ದೂರದಲ್ಲಿ ಪುಲ್ಲಾಜೆ ಪ್ರದೇಶ ವಿದೆ. ಮಾರ್ಗ ಮಧ್ಯೆ ನೆರಿಯ ಹೊಳೆ ಹರಿದು ಹೋಗುತ್ತಿದೆ. ಅಣಿಯೂರಿನಿಂದ ಪುಲ್ಲಾಜೆಯನ್ನು ಸಂಪರ್ಕಿಸಲು ಏಕ ಮಾತ್ರ ದಾರಿಯಾಗಿದ್ದು, ಆದರೆ ಹೊಳೆಗೆ ಸೇತುವೆ ಇಲ್ಲದೆ ಪ್ರತಿ ಮಳೆಗಾಲದಲ್ಲಿ ನದಿ ದಾಟಲು ಹಗ್ಗದ ಆಸರೆಯನ್ನೇ ಪಡೆಯುತ್ತಿದ್ದಾರೆ ಇಲ್ಲಿನ ಮಂದಿ.

ಏಳು ದಶಕಗಳ ಕನಸು
ವಿದ್ಯಾರ್ಥಿಗಳು, ಗರ್ಭಿಣಿಯರು, ವೃದ್ಧರು, ಕೂಲಿ ಕೆಲಸಗಾರರು ಹಗ್ಗದ ಆಸರೆ ಯಿಂದ ನದಿ ದಾಟಬೇಕು ಆಯ ತಪ್ಪಿದಲ್ಲಿ ಜೀವ ನದಿಪಾಲಾಗುವ ಭಯದಲ್ಲೇ ಪ್ರತಿ ವರ್ಷ ಹರಸಾಹಸದಿಂದ ದಾಟುತ್ತಿದ್ದಾರೆ. ಮಳೆಗಾಲದಲ್ಲಿ ದ್ವೀಪ ವಾಸಿಗಳಂತಾಗುವ ಇವರ ಸಂಕಷ್ಟ ಪರಿ ಹರಿಸಲು ಎಲ್ಲ ರಾಜಕೀಯ ಪಕ್ಷಗಳೂ ಮತಬ್ಯಾಂಕ್‌ ರಾಜಕೀಯ ನಡೆ ಸುತ್ತಾ ಬಂದಿವೆ ಹೊರತು ಭರವಸೆ ಈಡೇರಿಸಿಲ್ಲ. ಪರಿಣಾಮ ಏಳು ದಶಕಗಳ ಕನಸು ನನಸಾಗಿಲ್ಲ.

6 ತಿಂಗಳುಗಳ ಸಾಮಗ್ರಿ !
ಪುಲ್ಲಾಜೆಯ 65 ಕುಟುಂಬಗಳಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲ ಆರಂಭದಲ್ಲಿ 6 ತಿಂಗಳುಗಳ ಆಹಾರ ಸಾಮಗ್ರಿ ಸಹಿತ ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕಾಗುತ್ತದೆ.ನದಿ ನೀರು ಹೆಚ್ಚಾದಲ್ಲಿ ಮಕ್ಕಳಿಗೆ ಶಾಲೆ ಇಲ್ಲ,ಮನೆ ಮಂದಿಗೆ ವನವಾಸವೇ ಎಲ್ಲ.ಮೊಬೈಲ್‌ ನೆಟ್‌ವಕ್‌ ಇಲ್ಲದ ಈ ಊರಲ್ಲಿ ಪ.ಜಾ., ಪ.ಪಂ, ಮಲೆಕುಡಿಯ, ಗೌಡ ಸಹಿತ ಇತರ ಸಮುದಾಯಗಳ ಮಂದಿ ವಾಸಿಸುತ್ತಿದ್ದಾರೆ.

Advertisement

ಮಳೆಗಾಲ ಮುಗಿದ
ತತ್‌ಕ್ಷಣ ಕಾಮಗಾರಿ
ಪುಲ್ಲಾಜೆಗೆ 1 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಮೇ 26ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದೇನೆ. ತಾಂತ್ರಿಕ ತೊಂದರೆಗಳಿಂದ ಅಡಚಣೆಯಾಗಿದೆ. ಪ್ರತಿ ಕುಟುಂಬದ ಹಿತದೃಷ್ಟಿಯಿಂದ ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
 - ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next