ಶಿವಮೊಗ್ಗ: ಮಾರುಕಟ್ಟೆಯಲ್ಲಿ ಅಡಕೆಯಷ್ಟೇ ಬೇಡಿಕೆ ಇರುವ ಉತ್ಪನ್ನವೆಂದರೆ ಅಡಕೆ ಹಾಳೆಯ ತಟ್ಟೆ. ಹೋಟೆಲ್, ದೊಡ್ಡ ಕಾರ್ಯಕ್ರಮಗಳಲ್ಲಿ ಅಡಕೆ ಹಾಳೆ ತಟ್ಟೆ ಬಳಕೆ ಸಾಮಾನ್ಯ. ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದ ನಂತರ ಈ ತಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಲಕ್ಷಾಂತರ ಜನರಿಗೆ ಆಸರೆಯಾಗಿರುವ ಈ ಉದ್ಯಮ ಈಗ ವಿದ್ಯುತ್ ದರ ಏರಿಕೆಯಿಂದ ಮತ್ತೆ ಶಾಕ್‌ಗೆ ಒಳಗಾಗಿದೆ.
ಇಡೀ ದೇಶದಲ್ಲಿ ಅತಿ ಹೆಚ್ಚು ಅಡಕೆ ಹಾಳೆ ಉತ್ಪನ್ನಗಳು ತಯಾರಾಗುವುದು ಕರ್ನಾಟಕದಲ್ಲಿ. ನಂತರ ಸ್ಥಾನ ತಮಿಳುನಾಡು ಪಡೆದಿದೆ. ಪರಿಸರ ಸ್ನೇಹಿ ಕಾರಣಕ್ಕೆ ಅಡಕೆ ಹಾಳೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ತಟ್ಟೆಗೆ ಸೀಮಿತವಾಗಿದ್ದ ಉತ್ಪನ್ನಗಳು ಈಗ ಐಸ್‌ಕ್ರೀಂ ಹೋಲ್ಡರ್, ಕಪ್ ಮಾದರಿಯಲ್ಲೂ ದೊರೆಯುತ್ತವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೆ ಅಡಕೆ ಹಾಳೆ ತಟ್ಟೆ ತಯಾರಿಸುವ ಕನಿಷ್ಟ 3 ಸಾವಿರ ಯೂನಿಟ್ (ಸಣ್ಣ ಕೈಗಾರಿಕೆ)ಗಳು ಇವೆ. ಒಂದೊಂದು ಯೂನಿಟ್‌ನಲ್ಲಿ ಕನಿಷ್ಟ 10ರಿಂದ 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಹಾಳೆ ತಟ್ಟೆ ತಯಾರಿಕೆ ವ್ಯವಹಾರ ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ದಕ್ಷಿಣ ಕನ್ನಡಕ್ಕೆ ವಿಸ್ತಾರಗೊಂಡಿದೆ. ಮಾರುಕಟ್ಟೆ ಗಾತ್ರ ಕೂಡ ಹಿಗ್ಗಿದೆ. ಆರಂಭದಲ್ಲಿ ಎಲ್‌ಪಿಜಿ ಗ್ಯಾಸ್ ಬಳಸಿ ಪ್ಲೇಟ್ ತಯಾರಿಸಲಾಗುತಿತ್ತು. ಈಗ ವಿದ್ಯುತ್ ಮೆಷಿನ್‌ನಿಂದ ತಟ್ಟೆ ತಯಾರು ಮಾಡಲಾಗುತ್ತದೆ. ವಿದ್ಯುತ್, ಕಚ್ಚಾ ವಸ್ತು ಬೆಲೆ ಏರಿಕೆ ಉದ್ದಿಮೆದಾರರನ್ನು ಕಂಗೆಡಿಸಿದೆ.
ವಿದ್ಯುತ್ ದರ ಏರಿಕೆ ಬರೆ
ಮೂರು ವರ್ಷದಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. 2019ರಲ್ಲಿ 35 ಪೈಸೆ, 2020ರಲ್ಲಿ 30 ಪೈಸೆ, 2021ರಲ್ಲಿ 35 ಪೈಸೆ ಏರಿಕೆ ಮಾಡಲಾಗಿದೆ. ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಒಟ್ಟು 65 ಪೈಸೆ ಏರಿಕೆಯಾಗಿದೆ. ಇದು ನೇರವಾಗಿ ಹಾಳೆ ತಟ್ಟೆ ಉದ್ದಿಮೆಗಳಿಗೆ ತಟ್ಟಿದೆ. ಒಂದು ತಟ್ಟೆ ತಯಾರಾಗಲು 20 ಪೈಸೆ ವಿದ್ಯುತ್ ಬೇಕು. ಅದರ ವೆಚ್ಚ ಈಗ 10ರಿಂದ 15 ಪೈಸೆ ಹೆಚ್ಚಾಗುತ್ತದೆ. ಪೈಸೆ ಲೆಕ್ಕದಲ್ಲಿ ಲಾಭ ಪಡೆಯುವ ಉದ್ದಿಮೆದಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ. ನವೆಂಬರ್‌ಗೂ ಮೊದಲು ಒಂದು ಅಡಕೆ ಹಾಳೆ 2ರಿಂದ 2.30 ರೂ.ವರೆಗೆ ಮಾರಾಟವಾಗುತಿತ್ತು. ನವೆಂಬರ್ ನಂತರ ಅದನ್ನು 2.50ರಿಂದ 3.10ಕ್ಕೆ ಏರಿಕೆ ಮಾಡಲಾಗಿದೆ. ಕಚ್ಚಾ ವಸ್ತು ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಹಾಳೆ ತಟ್ಟೆ ಉದ್ದಿಮೆಗಳಿಗೆ ಶಾಪವಾಗಿ ಪರಿಣಮಿಸಿದೆ.
ವಿದ್ಯುತ್ ದರ ಏರಿಕೆಯಿಂದ ಉದ್ದಿಮೆದಾರರ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಕಚ್ಚಾ ವಸ್ತು ದರ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಸಾರಿಗೆ ಸಂಪರ್ಕ ವೆಚ್ಚ ಹೆಚ್ಚಾಗಿದೆ. ಈಗ ವಿದ್ಯುತ್ ದರ ಏರಿಕೆಯಾಗಿರುವುದು ಆಘಾತ ನೀಡಿದೆ. ತಮಿಳುನಾಡು ಉದ್ದಿಮೆದಾರರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್, ರಫ್ತು ಉತ್ತೇಜನ ನೀಡಲು ತರಬೇತಿ ನೀಡಲಾಗುತ್ತದೆ. ನಮ್ಮ ರಾಜ್ಯದಿಂದ ಕಚ್ಚಾ ವಸ್ತು ಪಡೆದು ಅವರು ಲಾಭ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲಿ.
-ಪವನ್, ಪೋನಿಕ್ಸ್ ಬಯೋ ಪ್ರಾಡಕ್ಟ್
-ಶರತ್ ಭದ್ರಾವತಿ