Advertisement

ಕುತೂಹಲ ಮೂಡಿಸಿರುವ ಜೆಡಿಎಸ್‌ ನಡೆ

12:24 PM Nov 22, 2021 | Team Udayavani |

ಮೈಸೂರು: ಜಾತ್ಯತೀತ ಜನತಾದಳದ ಅಭ್ಯರ್ಥಿ ಯಾರು? ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನಗಳಿರುವಾಗ ಈ ಪ್ರಶ್ನೆ ಕಾಡಿರುವುದು ಜೆಡಿಎಸ್‌ ಕಾರ್ಯಕರ್ತರಿಗಿಂತ ಹೆಚ್ಚಾಗಿ ಬಿಜೆಪಿ, ಕಾಂಗ್ರೆಸ್‌ ಮುಖಂಡರನ್ನು.

Advertisement

ಏಕೆಂದರೆ, ಜೆಡಿಎಸ್‌ ಅಭ್ಯರ್ಥಿ ಯಾವ ಸಮಾಜಕ್ಕೆ ಸೇರಿರುತ್ತಾರೆ ಎಂಬುದು ಚುನಾವಣಾ ಫ‌ಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಅದು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌.ರಘು ಕೌಟಿಲ್ಯ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿಧಾನಪರಿಷತ್‌ ಸದಸ್ಯ ಎನ್‌.ಧರ್ಮಸೇನಾ ಹಾಗೂ ನಿವೃತ್ತ ಅಧಿಕಾರಿ 76 ವರ್ಷದ ಡಾ.ಡಿ.ತಿಮ್ಮಯ್ಯ ಅವರ ಹೆಸರು ಕೇಳಿ ಬರುತ್ತಿದೆ.

ತಿಮ್ಮಯ್ಯ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆಯೇ ಹೆಚ್ಚಾಗಿದೆ. ಜೆಡಿಎಸ್‌ ಪಟ್ಟಿ ಹೊರಬಿದ್ದಿಲ್ಲ. ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳನ್ನು ನೋಡಿ ಕೊನೆ ಕ್ಷಣದಲ್ಲಿ ಚಾಣಾಕ್ಷ್ಯ ಹೆಜ್ಜೆ ಇಡುವಲ್ಲಿ ಪಳಗಿರುವ ಜೆಡಿಎಸ್‌ ಈಗ ಉಳಿದ ಎರಡು ಪಕ್ಷಗಳ ನಾಯಕರಲ್ಲಿ ಕುತೂಹಲ ಮೂಡಿಸಿದೆ.

ಟಿಕೆಟ್‌ ಆಕಾಂಕ್ಷಿಗಳು: ಜೆಡಿಎಸ್‌ನಲ್ಲಿ ಅನೇಕರು ಆಕಾಂಕ್ಷಿಗಳಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಉದ್ಯಮಿ ಸಂದೇಶ್‌ ನಾಗರಾಜ್‌ ಆ ಪಕ್ಷದಿಂದ ದೂರ ಸರಿದು ವರ್ಷಗಳೇ ಉರುಳಿವೆ. ಸಂದೇಶ್‌ ನಾಗರಾಜ್‌ ಜೆಡಿಎಸ್‌ ತೊರೆಯದೇ ಬಿಜೆಪಿ ಟಿಕೆಟ್‌ ಗೆ ಪ್ರಯತ್ನಿಸಿ ವಿಫ‌ಲರಾದರು.

ಇದನ್ನೂ ಓದಿ:- ಜಹೊರಿ : ನಮ್ಮೊಳಗೇ ತಣ್ಣಗೆ ಪಯಣಿಸುವ ಚಿತ್ರ

Advertisement

ಸಂದೇಶ್‌ ನಾಗರಾಜ್‌ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಪಡುತ್ತಿದ್ದಾಗ ಇತ್ತ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರ ಆಪ್ತ ಸಿ.ಬಸವೇಗೌಡರನ್ನು ವಾಪಸ್‌ ತನ್ನ ಪಕ್ಷಕ್ಕೆ ಕರೆತರಲು ಜೆಡಿಎಸ್‌ನ ಒಂದು ಬಣ ಪ್ರಯತ್ನಿಸಿತು. ವಿಧಾನಪರಿಷತ್‌ ಚುನಾವಣೆಗೆ ಟಿಕೆಟ್‌ ನೀಡುವ ಭರವಸೆ ನೀಡಿತು. ಆದರೆ, ಬಸವೇಗೌಡ ಅವರು ಜೆಡಿಎಸ್‌ನ ಈ ಆಹ್ವಾನವನ್ನು ವಿನಯದಿಂದಲೇ ನಿರಾಕರಿಸಿ ಬಿಜೆಪಿಯಲ್ಲೇ ಇರುವುದಾಗಿ ಹೇಳಿದರು.

ಸಂದೇಶ್‌ಗೆ ರೇವಣ್ಣ ಶ್ರೀರಕ್ಷೆ: ಈ ವಿದ್ಯಮಾನಗಳ ಮಧ್ಯೆಯೇ ಸಂದೇಶ್‌ ನಾಗರಾಜ್‌ ಈಗ ವಾಪಸ್‌ ಜೆಡಿಎಸ್‌ ಕದ ತಟ್ಟುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಅವರಿಗೆ ಶಾಸಕ ಎಚ್‌.ಡಿ.ರೇವಣ್ಣ ಅವರ ಶ್ರೀರಕ್ಷೆ ಇದೆ. ಸಂದೇಶ್‌ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂದೇಶ್‌ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಲು ಒಲವಿಲ್ಲ.

ಹೀಗಾಗಿ, ಈಗ ಕಾಂಗ್ರೆಸ್‌ ನಲ್ಲಿರುವ ಮಂಜೇಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಮಂಜೇಗೌಡ 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಂಜೇಗೌಡ ಕೇಂದ್ರ ಭಿಕ್ಷುಕರ ಪರಿಹಾರ ನಿಧಿಯ ಮಾಜಿ ಅಧ್ಯಕ್ಷರೂ ಹೌದು.

ಇಂದು ಜೆಡಿಎಸ್‌ ಸಭೆ: ಈ ಮಧ್ಯೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಮೈಸೂರಿನಲ್ಲಿ ಸೋಮವಾರ ಪಕ್ಷದ ಶಾಸ ಕರು, ಜಿಲ್ಲಾ ಪದಾಧಿಕಾರಿಗಳು, ಪ್ರಮುಖ ನಾಯ ಕರ ಸಭೆ ಕರೆದಿದ್ದಾರೆ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಮಂಜೇಗೌಡ ಈ ಸಭೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವ ಸಾಧ್ಯತೆಯೂ ಹೆಚ್ಚಾಗಿದೆ. ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆಡಿಎಸ್‌ ಹೂಡುವ ಅಭ್ಯರ್ಥಿ ಆಯ್ಕೆಯ ತಂತ್ರ ಚುನಾವಣಾ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

 ಧರ್ಮಸೇನಾ ಬದಲು ತಿಮ್ಮಯ್ಯಗೆ ಕೈ ಟಿಕೆಟ್‌?

ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿಚಾರದಲ್ಲಿ ಈ ಮಾತನ್ನು ಹೇಳುವಂತಿಲ್ಲ. ಕಾಂಗ್ರೆಸ್‌ ಟಿಕೆಟ್‌ ಕೈತಪ್ಪುವ ಸಾಧ್ಯತೆಯೇ ಹೆಚ್ಚಾಗಿರುವ ವಿಧಾನಪರಿಷತ್‌ ಸದಸ್ಯ ಧರ್ಮಸೇನಾ ಮೊದಲಿನಿಂದಲೂ ಕಾಂಗ್ರೆಸ್‌ಗೆ ನಿಷ್ಠಾವಂತರು.

ಆದಿ ಜಾಂಬವ ಸಮಾಜಕ್ಕೆ ಸೇರಿದ ಧರ್ಮಸೇನಾ ವಿವಾದಗಳಿಂದ ದೂರ ಇರುವವರು. ಅವರಿಗೆ ಟಿಕೆಟ್‌ ಕೈತಪ್ಪಿದರೂ ಪಕ್ಷಕ್ಕೆ ವಿರುದ್ಧವಾದ ಹೆಜ್ಜೆ ಇಡುವ ಸಾಧ್ಯತೆ ತುಂಬಾ ಕಡಿಮೆ. ಕಾಂಗ್ರೆಸ್‌ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿರುವ ಡಾ.ಡಿ.ತಿಮ್ಮಯ್ಯ ಅವರೂ ಆದಿಜಾಂಬವ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಆದರೆ, ತಿಮ್ಮಯ್ಯ ಅವರು ಮತದಾರರಿಗೆ ಹೆಚ್ಚು ಪರಿಚಿತರಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next