Advertisement

ಸಿದ್ದರಾಮಯ್ಯರಿಂದ ಧರ್ಮ-ಧ್ವಜದ ಹೆಸರಲ್ಲಿ ಕುತಂತ್ರ ರಾಜಕಾರಣ

02:22 PM Jul 27, 2017 | |

ಶಿವಮೊಗ್ಗ: ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡದಾರಿ ಹಿಡಿಯುತ್ತಿದ್ದಾರೆ. ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕೆಂದು ನೇರವಾಗಿ ಜಾತಿಯನ್ನೇ ಒಡೆದಾಳುವ ಕುತಂತ್ರ ರಾಜಕೀಯ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ದೂರಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಸಿಎಂ ಜಾತಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಲ್ಲದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ವಿವಾದ ಹುಟ್ಟುಹಾಕಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧ ವ್ಯಕ್ತವಾಗಿದೆ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವಿವಾದ ಹುಟ್ಟು ಹಾಕಿದ್ದಾರೆ. ಇದಕ್ಕೆ ವೀರಶೈವ ಮಠಾಧೀಶರು ಹಾಗೂ ಮುಖಂಡರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿ ವಿವಾದ  ಸೃಷ್ಟಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ವೀರಶೈವ ಧರ್ಮ: ನೀರಾವರಿ ಮಂತ್ರಿಗಳು ನೇರವಾಗಿ ಧರ್ಮ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಯಾವುದೇ ಕಾರಣಕ್ಕೂ ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕಬಾರದು. ಅಧಿಕಾರಕ್ಕಾಗಿ ವೀರಶೈವರನ್ನು ಒಡೆದಾಳುವುದು ಬೇಡ. ಬೇಕಿದ್ದರೆ ಸಿಎಂ ಸಿದ್ದರಾಮಯ್ಯ “ಕಾಂಗ್ರೆಸ್‌ ವೀರಶೈವ ಧರ್ಮ’ ಮಾಡಿಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಹೀಗೆ ಜಾತಿ ಹೆಸರಿನಲ್ಲಿ ಕುತಂತ್ರ ರಾಜಕಾರಣ ನಡೆಸುತ್ತಿರುವುದು ರಾಜ್ಯ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ವಿಷಾದಿಸಿದರು.

ಜನತೆ ಕ್ಷಮೆ ಯಾಚಿಸಲಿ: ವೀರಶೈವ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದರೆ ರಾಜ್ಯದಲ್ಲಿ ಎಲ್ಲಾ ಜಾತಿಯವರೂ ಪ್ರತ್ಯೇಕ ಧರ್ಮ ಕೇಳುತ್ತಾರೆ. ನಾವೂ ಅಲ್ಪಸಂಖ್ಯಾತರಾಗುತ್ತೇವೆ. ನಮಗೂ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುತ್ತವೆ ಎನ್ನುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಏಕತೆಯನ್ನು ಸಾರಬೇಕಾದ ಮುಖ್ಯಮಂತ್ರಿಗಳೇ ಜಾತಿ- ಜಾತಿ ನಡುವೆ ಬೆಂಕಿ ಹಚ್ಚಿ ಕರ್ನಾಟಕದಲ್ಲಿ ಮತ್ತೂಮ್ಮೆ ಅಧಿಕಾರ ಗಿಟ್ಟಿಸಿಕೊಳ್ಳುವ ಹುನ್ನಾರ ನಡೆಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೆಳಮಟ್ಟದ ರಾಜಕಾರಣ ಬಿಟ್ಟು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪೇಜಾವರ ಶ್ರೀ, ಡಾ| ಶಿವಕುಮಾರ ಶ್ರೀ, ನಿರ್ಮಲಾನಂದ ಶ್ರೀ, ಮಾದಾರ ಚನ್ನಯ್ಯ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳನ್ನು ನಾಡಿನ ಜನ ನಡೆದಾಡುವ ದೇವರು ಎಂದು ನಂಬಿದ್ದಾರೆ. ಶ್ರೀಗಳು ಸಮಾಜವನ್ನು ಒಂದುಗೂಡಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಪೇಜಾವರ ಶ್ರೀ ಕುರಿತು ಸಚಿವರು ಟೀಕೆ ಮಾಡುವುದರಿಂದ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಆ. 12 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಮುಂದಿನ ಯೋಜನೆಗಳ ಕುರಿತು ರಾಜ್ಯ ನಾಯಕರ ಜೊತೆ ಮೂರು ದಿನಗಳ ಕಾಲ ಚರ್ಚೆ ನಡೆಸಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ರೈಗೆ ಗೃಹ ಖಾತೆ ಕೊಡೋದು “ಕಳ್ಳನ ಕೈಗೆ ಬೀಗ ಕೊಟ್ಟಂತೆ”! 
ಶಿವಮೊಗ್ಗ: ಸಚಿವ ರಮಾನಾಥ್‌ ರೈಗೆ ಗೃಹಖಾತೆ ಜವಾಬ್ದಾರಿ ನೀಡುವುದು “ಕಳ್ಳನ ಕೈಗೆ ಬೀಗ ಕೊಟ್ಟಂತೆ’ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಖಾತೆ ಅತ್ಯಂತ ಪವಿತ್ರ ಖಾತೆ. ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುವ ವ್ಯಕ್ತಿ ಯಾವುದೇ ಪಕ್ಷ, ಜಾತಿ, ಧರ್ಮದ ಮೇಲೆ ಪ್ರೀತಿ ಹೊಂದಿರಬಾರದು, ಕಳಂಕಿತನಾಗಿರಬಾರದು. ರಮಾನಾಥ್‌ ರೈ ಇದಕ್ಕೆ ಖಂಡಿತ ಯೋಗ್ಯ ವ್ಯಕ್ತಿಯಲ್ಲ. ಯಾರಾದರೂ ಪ್ರಾಮಾಣಿಕ ವ್ಯಕ್ತಿಗೆ ಗೃಹ ಖಾತೆ ಜವಾಬ್ದಾರಿ ವಹಿಸಲಿ ಎಂದರು.

ಸಚಿವ ರಮಾನಾಥ್‌ ರೈ ಈ ಹಿಂದೆ ಪೊಲೀಸ್‌ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬಂಟ್ವಾಳ ಘಟನೆಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು. ಇವರಿಗೆ ಗೃಹ ಖಾತೆ ವಹಿಸಿದರೆ, ಇವರಿಂದ ಜನಪರವಾದ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರೈ ಅವರಿಗೆ ಗೃಹ ಖಾತೆಯನ್ನು ನೀಡಿದರೆ ಅದು ರಾಜ್ಯದ ಜನತೆಯ ದುರ್ದೈವ. ಗೃಹಖಾತೆಗೆ ಮಾಡಿದ ಅವಮಾನ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ರಾಜಕೀಯ ಮಾಡಿಕೊಂಡಿರುವ ರಮಾನಾಥ್‌ ರೈಗೆ ಯಾವುದೇ ಕಾರಣಕ್ಕೂ ಗೃಹಖಾತೆ ನೀಡಬಾರದು. ಇದರಿಂದ ಜನಸಾಮಾನ್ಯರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ತಮಗಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next