Advertisement

ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ : ಸಿದ್ದರಾಮಯ್ಯ ಕಿಡಿ

06:16 PM Jun 15, 2022 | Team Udayavani |

ತೀರ್ಥಹಳ್ಳಿ : ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದ್ದು ಇದರ ವಿರುದ್ದ ಕನ್ನಡಿಗರು ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರೋಹಿತ್ ಚಕ್ರವರ್ತಿ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ರಚಿಸಿರುವ ಪಠ್ಯಕ್ರಮವನ್ನು ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ನಡೆದ ಪಾದಯಾತ್ರೆಯ ಮುಕ್ತಾಯದಲ್ಲಿ ಪಟ್ಟಣದ ಸಂಸ್ಕೃತಿ ಮಂದಿರದ ಎದುರು ನಡೆದ ಸಭೆಯಲ್ಲಿ ಮಾತನಾಡಿ, ಕನ್ನಡದ ಅಸ್ಮಿತೆಗೆ ಧಕ್ಕೆಯುಂಟಾಗುವ ಸಂದರ್ಭ ಎದುರಾದಾಗ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆದಿರುವ ಈ ಪಾದಯಾತ್ರೆ ಇದಕ್ಕೆ ಮಾದರಿಯಾಗಿದ್ದು ಇಂದಿಲ್ಲಿ ಆರಂಭಗೊಂಡಿರುವ ಹೋರಾಟ
ನಿರಂತರವಾಗಿ ಮುಂದುವರೆಯಬೇಕಿದೆ ಎಂದರು.

ಸಂವಿಧಾನದ ಬಗ್ಗೆ ಗೌರವ ಇಲ್ಲದ ಮನುವಾದಿ ಸಂಘಪರಿವಾರದವರಿಗೆ ಸಮಾನತೆ, ಜಾತ್ಯಾತೀತತೆ,ಸಮಾನ ಅವಕಾಶಗಳು ಬೇಕಿಲ್ಲಾ. ಮಹಾಪುರುಷರ ಚರಿತೆಯನ್ನೇ ತಿರುಚಿ ಮಕ್ಕಳಿಗೆ ವಿಷ ಉಣಿಸುವ ಪ್ರಯತ್ನ ನಡೆದಿದೆ. ಪಠ್ಯ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಿದರೆ ಸಾಲದು. ಪಠ್ಯಕ್ರಮವನ್ನೂ ಕೈ ಬಿಡಬೇಕು. ಮಕ್ಕಳಿಗೆ ವಿದ್ಯೆ ಕಲಿಸುವುದಕ್ಕೆ ಶಿಕ್ಷಣ ಸಚಿವ ನಾಗೇಶ್ ಯೋಗ್ಯರಲ್ಲಾ ಎಂದೂ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಅಜ್ಞಾನಿ ಎಂದು ಟೀಕಿಸಿದ ಮಾಜಿ ಸಿಎಂ, 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇವರಂತ ಅಸಮರ್ಥ ಗೃಹ ಸಚಿವರನ್ನು ನೋಡಿಲ್ಲಾ. ಕಿಮ್ಮನೆ ರತ್ನಾಕರ್ ರಾಜ್ಯ ಕಂಡ ಕೆಲವೇ ರಾಜಕಾರಣಿಗಳಲ್ಲಿ ಒಬ್ಬ ಯೋಗ್ಯ ಮತ್ತು ಸಜ್ಜನ ರಾಜಕಾರಣಿಯಾಗಿದ್ದಾರೆ.ಗ್ರಾಪಂ ಸದಸ್ಯ ಕೂಡಾ ಅಧಿಕಾರ ಬಿಟ್ಟು ಕೊಡದ ಈ ಕಾಲದಲ್ಲಿ ತಮಗೆ ದೊರೆತಿದ್ದ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ ಜಿ.ಎಸ್.ಸಿದ್ದರಾಮಯ್ಯ, ನೂರಾರು ವರ್ಷಗಳಿಂದ ಶಿಕ್ಷಣ ವಂಚಿತರಾಗಿರುವ ಹಳ್ಳಿಗಾಡಿನ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವುದಕ್ಕೆ ಆಳುವವರು ನಾಚಿಕೆ ಪಡಬೇಕಿದೆ. ದೇಶ ಕಟ್ಟುವ ಮನಸ್ಸುಗಳಿಗೆ ದೇಶಪ್ರೇಮದ ಹೆಸರಿನಲ್ಲಿ ಮಾನಸಿಕ ಕೊಳಚೆಯಾದ ದ್ವೇಷವನ್ನು ಬಿತ್ತುವ ಪ್ರಯತ್ನ ಅಪಾಯಕಾರಿಯಾಗಿದೆ. ಕರ್ನಾಟಕದ ಸಾರ್ವಭೌಮತೆಯ ಅಸ್ಮಿತೆಯನ್ನು ಸಾರುವ ನಾಡಗೀತೆಯನ್ನೇ ಅಪಮಾನಗೊಳಿಸಿರುವ ವಿಕಾರ ಮನಸ್ಸಿನ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವ ಈ ಸರ್ಕಾರಕ್ಕೆ ನಾಡಗೀತೆಯನ್ನು ಹಾಡುವ ನೈತಿಕತೆಯೂ ಇಲ್ಲವಾಗಿದೆ ಎಂದೂ ಹೇಳಿದರು.

Advertisement

ಮಾಜಿ ಸಭಾಪತಿ ರಮೇಶ್‌ಕುಮಾರ್ ಮಾತನಾಡಿ, ನೇರವಾಗಿ ಸಂವಿಧಾನವನ್ನು ಮುಟ್ಟುವ ಧೈರ್ಯವಿಲ್ಲದ ಬಿಜೆಪಿ ಅನ್ಯಮಾರ್ಗದಿಂದ ಜನರ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿದೆ. ಮಾನವ ನಿರ್ಮಿತ ವಿನಾಶಕಾರಿ ಜಾತಿ ವ್ಯವಸ್ಥೆಯಲ್ಲಿ ವೈಚಾರಿಕ ದಾರಿದ್ರ್ಯದಿಂದ ನರಳುತ್ತಿರುವ ನಾವು ಈ ನೆಲದ ಕುವೆಂಪು, ಕಡಿದಾಳು ಮಂಜಪ್ಪ, ಶಾಂತವೇರಿ ಮುಂತಾದವರ ಹೆಸರು ಹೇಳುವ ಅರ್ಹತೆಯನ್ನು ಕಳೆದುಕೊಂಡಿದ್ದೇವೆ. ಆದರೆ
ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತ್ರ ನಿರ್ಭಯವಾಗಿ ನೈತಿಕತೆಯ ಬಗ್ಗೆ ಮಾತನಾಡುವ ಅರ್ಹತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಕಿಮ್ಮನೆ ರತ್ನಾಕರ್, ಪ್ರಗತಿಪರ ಚಿಂತಕರು,ಸಾಹಿತಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಒಂದು ಕೋಟಿ ಮಕ್ಕಳ ಮನಸ್ಸನ್ನು ಕೆಡಿಸುವ ಈ ಪ್ರಕರಣದ ಬಗ್ಗೆ ನಾಡಿನ ಚಿಂತಕರು ಮುಂದಾದಲ್ಲಿ ಈ ಸರ್ಕಾರ ತಕ್ಕ ಬೆಲೆಯನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಈ ಸಂದರ್ಭದಲ್ಲಿ ವಿಶ್ವಮಾನವ ವೇದಿಕೆಯ ಸಂಚಾಲಕ ಕಡಿದಾಳು ದಯಾನಂದ್, ಡಾ.ನಾ ಡಿಸೋಜಾ, ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ರೈತ ಮುಖಂಡರಾದ ಕೆ.ಟಿ.ಗಂಗಾಧರ್ ಹಾಗೂ ಬಸವರಾಜಪ್ಪ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಎಚ್.ಎಸ್. ಸುಂದರೇಶ್ ಮುಂತಾದವರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next