Advertisement
ಸತತ ಬರಗಾಲದಿಂದ ಅಂತರ್ಜಲ ಮಟ್ಟ ಪಾತಾಳ ಕಂಡಿದೆ. ನೀರಿನ ಮೂಲಗಳು ಬತ್ತಿವೆ. ಇದರಿಂದ ತೋಟದ, ಹೊರ ಜಮೀನುಗಳಲ್ಲಿ ಬಿತ್ತನೆ, ನಾಟಿ ಕೃಷಿ ಕೈ ಬಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ರೈತನ ಛಲ ಮಾತ್ರ ಕಡಿಮೆಯಾಗಿಲ್ಲ. ಆತ, ಗ್ರಾಮದಲ್ಲಿ ವ್ಯರ್ಥವಾಗಿ ಚರಂಡಿ ಸೇರುತ್ತಿದ್ದ ಕೊಚ್ಚೆ ನೀರನ್ನೇ ಬೆಳೆಗೆ ಹಾಯಿಸುವ ಮೂಲಕ ಥರಹೇವಾರಿ ಬೆಳೆ ತೆಗೆದಿದ್ದಾರೆ. ಅವರೇ ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ರೈತ ಮಕ್ಬುಲ್‌ಸಾಬ ಓಲೇಕಾರ. ಅವರು ತಮ್ಮ 4 ಎಕರೆ ತೋಟದ ಬೆಳೆಗಳಿಗೆ ಕೊಚ್ಚೆ ನೀರನ್ನು ಬಳಸಿಕೊಂಡು ಲಾಭ ಪಡೆದುಕೊಂಡಿದ್ದಾರೆ. ಚರಂಡಿ ಮತ್ತು ಹಳ್ಳದ ಪಕ್ಕದಲ್ಲಿಯೇ ಜಮೀನಿದೆ. ತೋಟದಲ್ಲಿ ಮೆಕ್ಕೆ ಜೋಳ, ಸಜ್ಜೆ, ಬಿ.ಟಿ ಹತ್ತಿ, ಖಾಲಿ ಉಳಿದ ಜಮೀನಿನಲ್ಲಿ ಟೊಮೆಟೊ, ಮೂಲಂಗಿ, ಮೆಂತ್ಯೆ ಪಲ್ಲೆ, ಉಂಚಿಕ್ ಪಲ್ಲೆ, ಸೌತೆಕಾಯಿ ಸೇರಿ ತರಹೇವಾರಿ ತರಕಾರಿ ಬೆಳೆಯುತ್ತಿದ್ದಾರೆ.
ಹಲವು ವರ್ಷಗಳಿಂದ ಈ ನೀರು ಚರಂಡಿ ಮೂಲಕ ಹಳ್ಳಕ್ಕೆ ಹರಿಯುತ್ತಿತ್ತು. ಆಗ ಯಾರೂ ಅದರತ್ತ ಗಮನ ಹರಿಸಿರಲಿಲ್ಲ. ಆದರೆ ಅಂತರ್ಜಲ ಮತ್ತು ಮಳೆ ಕೈ ಕೊಟ್ಟಾಗಲೇ ಕೊಚ್ಚೆ ನೀರನ್ನು ಕೃಷಿಗೆ ಬಳಸುವ ಯೋಚನೆ ಬಂದಿದ್ದು. ಜಮೀನಿನ ಮೇಲ್ಭಾಗದಿಂದ ಕೊಚ್ಚೆ ನೀರು ಹರಿದು ಬರುತ್ತದೆ. ಅದನ್ನು ಗುಂಡಿಯಲ್ಲಿ ನಿಲ್ಲಿಸಿ, ಗುಂಡಿ ಪಕ್ಕದಲ್ಲಿಯೇ ಒಂದು ರಿಂಗ್ ಬಾವಿ ತೆಗೆಯಲಾಗಿದೆ. ನೀರು ಫಿಲ್ಟರ್ ಆದ ಬಳಿಕ ರಿಂಗ್ ಬಾವಿಯಲ್ಲಿ ಸಂಗ್ರಹವಾಗುತ್ತದೆ. ಈ ನೀರನ್ನು ಪಂಪ್ ಸೆಟ್ ಅಳವಡಿಸಿ, ಪೈಪ್‌ಲೈನ್ ಮೂಲಕ ನೀರು ಹರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಭರಪೂರ ಫಸಲು
ಒಂದು ಎಕರೆಯಲ್ಲಿ ಬಿ.ಟಿ ಹತ್ತಿ ನಾಟಿ ಮಾಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಕಾಯಿ ಕಟ್ಟಿದೆ. 1 ಎಕರೆಗೆ ಮೆಕ್ಕೆ ಜೋಳ ನಾಟಿ ಮಾಡಿದ್ದು 6 ಅಡಿ ಎತ್ತರ ಬೆಳೆದು ಒಂದು ದಂಟಿಗೆ 3- 4 ತೆನೆ ಬಿಟ್ಟಿದೆ. 1 ಎಕರೆಯಲ್ಲಿ ಸಜ್ಜೆ ಬಿತ್ತನೆ ಮಾಡಿದ್ದು, ಈಗಾಗಲೇ ಕಟಾವು ಹಂತಕ್ಕೆ ಬಂದಿದೆ. ಈ ಎಲ್ಲಾ ಬೆಳೆಗಳಿಗೆ 3- 4 ಸಾರಿ ನೀರು ಹರಿಸಲಾಗಿದೆ. ಈ ಎಲ್ಲಾ ಬೆಳೆಗಳಿಗೆ ಯಾವುದೇ ರೋಗ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಬೆಳೆಗಳು, ನಾನಾ ಬಗೆಯ ತರಕಾರಿ ಸೊಪ್ಪುಗಳು ಬೆಳೆದಿದೆ. ಸಜ್ಜೆಗೆ 3,000 ರೂ., ಹತ್ತಿಗೆ ನಾಟಿ, ಕಸ ಕಳೆಗೆ ಸೇರಿ 8,000 ರೂ., ಮೆಕ್ಕೆ ಜೋಳಕ್ಕೆ 6,000 ರೂ., ಒಟ್ಟು 17,000 ರೂ. ಖರ್ಚು ಬಿದ್ದಿದೆ. ಇದೀಗ ಬೆಳೆ ಚೆನ್ನಾಗಿ ಬಂದಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದಾರೆ. ತರಕಾರಿ ಬೆಳೆಗಳಿಂದ ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಅವರು.
Related Articles
Advertisement
ಚರಂಡಿ ನೀರನ್ನು ಬೆಳೆಗೆ ಹರಿಸಿದ್ದರಿಂದ ಇದುವರೆಗೂ ಯಾವ ತೊಂದರೆಯೂ ಆಗಿಲ್ಲ. ಬರಗಾಲದಲ್ಲೂ ಬೆಳೆ ಬೆಳೆಯುವುದು ಇದರಿಂದ ಸಾಧ್ಯವಾಗಿದೆ. ಇನ್ನು 15- 20 ದಿನದಲ್ಲಿ ಸಜ್ಜೆ, ಮೆಕ್ಕೆ ಜೋಳ ಕಟಾವಿಗೆ ಬರುತ್ತದೆ. ಹತ್ತಿ ಗುಣಮಟ್ಟದಲ್ಲಿ ಕಾಯಿ ಬಿಟ್ಟಿದೆ. ಲಾಭ ದೊರೆಯುವ ನಿರೀಕ್ಷೆ ಇದೆ.
– ಮಕ್ಬುಲ್‌ಸಾಬ ಓಲೇಕಾರ, ರೈತ, ಬಳೂಟಗಿ