ಚಿಕ್ಕಮಗಳೂರು: ಅಭಿವೃದ್ಧಿ ವಿಚಾರದಲ್ಲಿ ವಿಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ರಾಜಕೀಯ ಪ್ರೇರಿತ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು. ಆದರೆ, ವಿಪಕ್ಷಗಳಿಗೆ ಬಹುಶಃ ನಾಳೆಯೇ ಚುನಾವಣೆ ಬರುತ್ತೆ ಎಂದು ಕನಸ್ಸು ಬಿದ್ದಿರಬೇಕು ಅದಕ್ಕೆ ಈಗಲೇ ರಾಜಕಾರಣ ಶುರು ಮಾಡಿದ್ದಾರೆ ಎಂದರು.
ನಾನು 24 ಗಂಟೆ ಕೆಲಸ ಮಾಡುವ ಸಕ್ರಿಯ ರಾಜಕಾರಣಿ. ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ, ನನ್ನನ್ನು ನಿಷ್ಕ್ರಿಯ ಎನ್ನುವ ಮುಂಚೆಅವರಲ್ಲಿರುವ ಮಾನದಂಡ ಏನು ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಕಳೆದ 16 ವರ್ಷಗಳಿಂದ ಜಿಲ್ಲೆಯವರು ಉಸ್ತುವಾರಿ ಸಚಿವರು ಇರಲಿಲ್ಲ, ನಾನು 11 ತಿಂಗಳು, ಜೀವರಾಜ್ 9 ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೆವು. ಉಳಿದಂತೆ 16 ವರ್ಷ ಜಿಲ್ಲೆಯವರೇ ಉಸ್ತುವಾರಿ ಸಚಿವರು ಆಗಿರಲಿಲ್ಲ ಎಂದರು.
ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುತ್ತಿದ್ದರು. ಅವರು ಕೇವಲ ಧ್ವಜ ಹಾರಿಸುವುದಕಷ್ಟೇ ಸೀಮಿತರಾಗುತ್ತಿದ್ದರು. ಎಲ್ಲೋ ಒತ್ತಾಯದ ಮೇರೆಗೆ ಒಂದೋ ಎರಡೋ ಕೆಡಿಪಿ ಸಭೆ ಮಾಡುತ್ತಿದ್ದರು. ಮತ್ತೆ ಜಿಲ್ಲೆಯ ಕಡೆ ತಲೆ ಹಾಕುತ್ತಿರಲಿಲ್ಲ ಎಂದರು.
ನಾನು ಕ್ಷೇತ್ರದಲ್ಲಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದ ಅವರು, ಕೋವಿಡ್ ಸಂಕಷ್ಟದ ಕಾಲದಲ್ಲೂ ಮೆಡಿಕಲ್ ಕಾಲೇಜು ತಂದಿದ್ದೇನೆ. ನೀರಾವರಿ ಸಂಬಂಧ ಜಿಲ್ಲಾ ಪಂಚಾಯತ್ ಸಭೆ ನಡೆಸಿ ಸಮಗ್ರ ವರದಿ ಎಲ್ಲರ ಮುಂದಿಟ್ಟಿದ್ದೇನೆ. ಅವೈಜ್ಞಾನಿಕ ಯೋಜನೆ ಕುರಿತು ವಿಧಾನಸೌಧದಲ್ಲಿ ಮಾತನಾಡಿದ್ದೇನೆ. ಅಂದು ಇದರ ಬಗ್ಗೆ ಧ್ವನಿ ಎತ್ತದವರು ಇಂದು ಕರಾಳ ದಿನ ಆಚರಿಸುತ್ತಿದ್ದಾರೆ. ಅವರಿಗೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದು, ಮತ್ತು ಸಕ್ರಿಯ ವ್ಯಕ್ತಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಹೊಟ್ಟೆಕಿಚ್ಚು ಎಂದರು.
ಜಿಲ್ಲಾ ಉತ್ಸವ ಮಾಡುವಾಗ ಅನೇಕರು ಉತ್ಸವ ಮಾಡದಂತೆ ಧ್ವನಿ ಎತ್ತಿದ್ದರು. ಆದರೂ ಉತ್ಸವ ವೈಭವದಿಂದ ನಡೆಯಿತು. ಅದೇ ರೀತಿ ಅಭಿವೃದ್ಧಿ ಕೆಲಸ ಮಾಡೇ ಮಾಡುತ್ತೇನೆ. ನಿಮ್ಮ ರಾಜಕಾರಣವನ್ನು ಎದುರಿಸುತ್ತೇನೆ. ನನ್ನ ಮೇಲೆ ಈ ಹಿಂದೆಯೂ ಅನೇಕ ಆರೋಪ ಮಾಡಿದ್ದೀರಿ. ಆದರೂ, ಜನರು ಸಿ.ಟಿ. ರವಿ ಬೆಸ್ಟ್ ಎಂದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ್ದಾರೆ ಎಂದರು.