ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ, ಮೈಸೂರು ಜನ. ಅದು ಅಸಂಸದೀಯ ಪದವೂ ಅಲ್ಲ, ಬೈಗುಳವೂ ಅಲ್ಲ. ನಾನು ಸಿದ್ದರಾಮಯ್ಯ ಅವರಿಗೆ ಖುಷಿಯಾಗುವ ಸಂಗತಿಯನ್ನೇ ಹೇಳಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಪ್ರಿಯವಾಗಿರುವುದು ಟಿಪ್ಪು ಟೋಪಿ. ಅವರಿಗೆ ಆನಂದ ಕೊಡುವ ಸಂಗತಿಯನ್ನೇ ಹೇಳಿದ್ದೇನೆ. ಹೀಗಾಗಿ ನಾನು ಹೇಳಿದ ಮಾತುಗಳಲ್ಲಿ ಯಾವ ತಪ್ಪೂ ಇಲ್ಲ. ಈ ಹಿಂದೆ ಈಶ್ವರಪ್ಪ, ಮೈಸೂರು ಸಂಸದ ಪ್ರತಾಪಸಿಂಹ ಅವರು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದಾರೆ. ನಾನೇ ಮೊದಲು ಹೇಳಿದ್ದಲ್ಲ. ನಾನು ದೂರದ ಸಂಗತಿ ಅಥವಾ ದುಃಖದ ಸಂಗತಿ ಹೇಳಿಲ್ಲ, ಅವರಿಗೆ ಖುಷಿ ಆಗದಿರುವುದು ಕೇಸರಿ, ಕುಂಕುಮ, ಪೇಟ. ಅದನ್ನು ಹೇಳಿದರೆ ಅವರು ಬೇಜಾರು ಮಾಡಿಕೊಳ್ಳಬಹುದು. ಆದರೆ, ನಾನು ಹೇಗಿದ್ದೇನೋ ಹಾಗೇ ಸಿ.ಟಿ.ರವಿ ಹೇಳಿದ್ದಾನೆಂದು ಅವರು ಖುಷಿ ಪಡುತ್ತಾರೆ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಕೊಟ್ಟಿರುವ ಬಿರುದುಗಳನ್ನು ನೋಡಬೇಕು. ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ನನ್ನ ಮನೆಗೆ ಬಂದರೆ ಅತಿಥಿಗಳೆಂದು ಸತ್ಕಾರ ಮಾಡುತ್ತೇವೆ. ದುರ್ಭಾವನೆಯಿಂದ ಬಂದರೆ ಅದೇ ರೀತಿ ಪ್ರತಿಕ್ರಿಯೆ ನೀಡುತ್ತೇವೆ ಎಂದರು.