Advertisement

ದತ್ತ ಪೀಠ ಆಸ್ತಿ ಕಬಳಿಸುವವರನ್ನು ಸುಮ್ಮನೆ ಬಿಡಲ್ಲ: ಸಿ.ಟಿ.ರವಿ

09:13 PM Dec 04, 2022 | Team Udayavani |

ಚಿಕ್ಕಮಗಳೂರು: ದತ್ತಾತ್ರೇಯ ಸ್ವಾಮಿಯ ಆಸ್ತಿ ಕಬಳಿಸುವ ಪಿತೂರಿ ಮಾಡಿ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ದೇವರ ಆಸ್ತಿಯನ್ನು ಯಾರ್ಯಾರು ಕಬಳಿಸಿದ್ದಾರೆಂಬ ಮಾಹಿತಿ ಸಿಕ್ಕಿದ್ದು ಈ ಸಂಬಂಧ ತನಿಖೆಗೆ ಕೋರಿದ್ದರಿಂದ ಸರ್ಕಾರ ತನಿಖೆಗೆ ಆದೇಶ ಮಾಡಿದೆ. ದೇವರ ಆಸ್ತಿಯನ್ನು ಕಬಳಿಸುವವರನ್ನು ಸುಮ್ಮನೆ ಬಿಡಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ದತ್ತಾತ್ರೇಯ ಸ್ವಾಮಿಯ ಆಸ್ತಿ ಹೊಡೆಯುವ ಉದ್ದೇಶದಿಂದಲೇ ಸಂಸ್ಥೆ ಹುಟ್ಟು ಹಾಕಿದ್ದು, ಈ ಆಸ್ತಿ ಕಬಳಿಕೆ ಹೊಂಚು ಹಾಕಿದವರಲ್ಲಿ ಕಾಂಗ್ರೆಸ್‌ನವರೂ ಇದ್ದಾರೆ. ಬಾಬಾಬುಡನ್‌ ದರ್ಗಾ ಹಾಗೂ ದತ್ತಪೀಠ ಒಂದೇ ಅಲ್ಲ. ದತ್ತಾತ್ರೇಯ ಸ್ವಾಮಿ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದಲೇ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಎಂದು ಕ್ಲಬ್‌ ಮಾಡಿ ಸಂಸ್ಥೆ ಹುಟ್ಟು ಹಾಕಲಾಗಿದೆ. ದರ್ಗಾ, ಪೀಠ ಒಂದೇ ಸ್ಥಳದಲ್ಲಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಇವೆ ಎಂದರು.

ಬಾಬಾಬುಡನ್‌ ದರ್ಗಾ ಇರುವುದು ಚಿಕ್ಕಮಗಳೂರು ತಾಲೂಕು ನಾಗೇನಹಳ್ಳಿಯಲ್ಲಿ. ಈ ಸಂಬಂಧ ಸರ್ಕಾರಿ ದಾಖಲೆಗಳೇ ಇವೆ. ಇವೆರಡೂ ಒಟ್ಟಾಗಿರುವ ಬಗ್ಗೆ ಯಾವ ಸರ್ಕಾರಿ, ಕಂದಾಯ ದಾಖಲೆಗಳೇ ಇಲ್ಲ. ದರ್ಗಾಕ್ಕೂ ದತ್ತಾತ್ರೇಯ ಪೀಠಕ್ಕೂ ಸಂಬಂಧವೇ ಇಲ್ಲ. ದೇವರ ಆಸ್ತಿ, ಜಮೀನು ಕಬಳಿಸುವ ಸಂಚಿನ ಭಾಗವಾಗಿ ಎರಡೂ ಸಂಸ್ಥೆಗಳನ್ನು ಸಂಯುಕ್ತಗೊಳಿಸಲಾಗಿದೆ ಎಂದರು.

ದತ್ತಾತ್ರೇಯ ಸ್ವಾಮಿ ಹೆಸರಿನಲ್ಲಿ 1861 ಎಕರೆ ಜಮೀನು ಇದೆ. ಇದನ್ನು ಕಬಳಿಸುವುದಕ್ಕಾಗಿಯೇ ಇಷ್ಟೆಲ್ಲ ರಾದ್ಧಾಂತ ಮಾಡಲಾಗುತ್ತಿದೆ. ಆಸ್ತಿ ಕಬಳಿಸಿರುವವರಲ್ಲಿ ಕಾಂಗ್ರೆಸ್‌ನವರೂ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸಂಬಂಧ ನಾನು ಸರ್ಕಾರವನ್ನು ತನಿಖೆಗೆ ಕೋರಿದ್ದು, ಸರ್ಕಾರ ತನಿಖೆಗೆ ಆದೇಶವನ್ನೂ ನೀಡಿದೆ ಎಂದರು.

ಸರ್ಕಾರ ಅರ್ಚಕರನ್ನು ನೇಮಿಸುವ ಮೂಲಕ ಮೊದಲ ಹಂತದ ಹೋರಾಟಕ್ಕೆ ನ್ಯಾಯ ನೀಡಿದೆ. ದತ್ತಪೀಠ ಬೇರೆ, ದರ್ಗಾ ಬೇರೆ ಎಂಬ ಬಗ್ಗೆ ಸರ್ಕಾರಿ ದಾಖಲೆಗಳಿದ್ದು, ಈ ಸಂಬಂಧ ನಾವು ಎರಡನೇ ಹೋರಾಟಕ್ಕಿಳಿಯುತ್ತೇವೆ. ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ. ಮುಸಲ್ಮಾನರ ಬಗ್ಗೆ ನಮಗೆ ಪೂರ್ವಾಗ್ರಹವಿಲ್ಲ. ಅವರ ದರ್ಗಾದಲ್ಲಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಪೀಠವನ್ನು ಕಬಳಿಸಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next