ಚಿಕ್ಕಮಗಳೂರು: ತಮ್ಮ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಸಿದ್ದರಾಮಯ್ಯ, ಪ್ರಧಾನಿ ಮೋದಿಯವರಲ್ಲ. ಸಿದ್ದರಾಮಯ್ಯ ಯಾವ ರೀತಿ ನ್ಯಾಯ ಬಯಸುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಸೋಲಿಸಿದವರನ್ನು ಸೋಲಿಸಿ ನ್ಯಾಯ ಕೊಡಿ ಎಂದು ಪರಮೇಶ್ವರ ಕೇಳಬೇಕು. ನ್ಯಾಯ ಬೇಕೆಂದು ಕೇಳಬೇಕಿರುವುದು ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್. ಸಿದ್ದರಾಮಯ್ಯನವರು ಅಲ್ಲ. ಅಧಿಕಾರ ಇದ್ದರೆ ಇರುತ್ತೇನೆ. ಇಲ್ಲವಾದರೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಅನ್ನುವವರು ಮೋದಿ ಅಲ್ಲ. ಎಸ್‌ಡಿಪಿಐ, ಪಿಎಫ್‌ಐ ಮೇಲಿನ ಕೇಸ್‌ಗಳನ್ನು ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು ಸಿದ್ದರಾಮಯ್ಯ. ರಿಡ್ನೂ ಹೆಸರಿನಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಕ್ಕೆ ಜನರು ನ್ಯಾಯ ಕೊಟ್ಟಿದ್ದಾರೆ. ಸಮಾಜವಾದಿ ಹೆಸರಿನಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದು, ಜನ ನ್ಯಾಯ ದೊರಕಿಸುವ ಮೂಲಕ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸಲು ಸದಾ ಮುಂದಿದ್ದಾರೆ ಎಂದರು.