Advertisement

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

08:55 PM Dec 24, 2024 | Team Udayavani |

ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವುದರ ಜತೆಗೆ ಬಂಧನೋತ್ತರ ವಿದ್ಯಮಾನದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ಅವರಿಗೆ ಮನವಿ ಸಲ್ಲಿಸಿದೆ.

Advertisement

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಜನಾರ್ದನ ರೆಡ್ಡಿ, ಮುನಿರಾಜು, ಎಸ್‌.ರಘು, ಮೇಲ್ಮನೆ ಸದಸ್ಯರಾದ ರವಿಕುಮಾರ್‌, ಕೇಶವ ಪ್ರಸಾದ್‌, ಗೋಪಿನಾಥ ರೆಡ್ಡಿ ಅವರನ್ನೊಳಗೊಂಡ ನಿಯೋಗವು ರಾಜಭವನಕ್ಕೆ ತೆರಳಿ ಈ ಸಂಬಂಧ ಮನವಿ ಸಲ್ಲಿಸಿದೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕ ಸಿ.ಟಿ.ರವಿಗೆ ಮಾಡಿದ ಅಪಮಾನದ ಬಗ್ಗೆ ಅರ್ಧ ಗಂಟೆ ಕಾಲ ಚರ್ಚೆ ನಡೆಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪೊಲೀಸ್‌ ಠಾಣೆಗಿಂತ ಕಬ್ಬಿನ ಗದ್ದೆ ಸುರಕ್ಷಿತವೇ? ರವಿಯವರಿಗೆ ಮುಸ್ಲಿಂ ಉಗ್ರವಾದಿಗಳು ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಇದೆಲ್ಲ ಗೊತ್ತಿದ್ದೂ ಪೊಲೀಸರು ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ಸೃಷ್ಟಿಸಿದೆ ಎಂದು ಅಭಿಪ್ರಾಯಪಟ್ಟರು.ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಅಂದರೆ ಈ ಸರ್ಕಾರದಲ್ಲಿ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದರ್ಥವೇ? ಸಿ.ಟಿ.ರವಿ ಅವರಿಗೆ ಹೀಗಾದರೆ ಇನ್ನು ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅದಕ್ಕಾಗಿ ರಾಜ್ಯಪಾಲರು ಸಂವಿಧಾನವನ್ನು ರಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮಾಹಿತಿಯೇ ಇರಲಿಲ್ಲ. ರವಿ ಎಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸುರಕ್ಷತೆಯ ಕಾರಣ ನೀಡುತ್ತಾರೆ. ಇದು ಬಫ‌ೂನ್‌ ಸರ್ಕಾರವಾಗಿದ್ದು, ಇಷ್ಟು ಕೆಟ್ಟದಾಗಿ ಯಾರೂ ಸರ್ಕಾರ ನಡೆಸಿಲ್ಲ. ಅಂದು ಪೊಲೀಸ್‌ ಆಯುಕ್ತರಿಗೆ ನಿರಂತರವಾಗಿ ಫೋನ್‌ ಕರೆ ಬರುತ್ತಿತ್ತು. ಆ ಕರೆ ಮಾಡುತ್ತಿದ್ದವರು ಯಾರು ? ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕರೆ ಮಾಡುತ್ತಿದ್ದರೇ? ಇದೆಲ್ಲದರ ಬಗ್ಗೆ ಮುಕ್ತ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕಿದ್ದರೆ ನ್ಯಾಯಾಂಗ ತನಿಖೆಯಾಗಬೇಕೆಂದು ಆಗ್ರಹಿಸಿದರು.

Advertisement

ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಯಾಗಿ ಬದಲಾಗಿದೆ. ಎಲ್ಲ ತನಿಖೆಯನ್ನು ಪೊಲೀಸರೇ ಮಾಡುತ್ತಾರೆ ಎಂದರೆ ಸಿಒಡಿಗೆ ಕೊಟ್ಟರೂ ಮತ್ತೂಬ್ಬರಿಗೆ ಕೊಟ್ಟರೂ ಒಂದೇ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗುತ್ತಿದೆ. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ ಎಂದರು.

ಮಂಜುನಾಥನ ಬಿಟ್ಟುಬಿಡಿ: ಅಶೋಕ್‌
ಸಿ.ಟಿ.ರವಿ ತಮ್ಮ ವಿರುದ್ಧ ಅವಾಚ್ಯ ಪದ ಬಳಸಿದ್ದಾರೋ, ಇಲ್ಲವೋ ಎಂಬ ಬಗ್ಗೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಬಂದು ಹೇಳಲಿ ಎಂದು ಸವಾಲು ಹಾಕಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ತಿರುಗೇಟು ನೀಡಿದ ಅಶೋಕ್‌, ಯಾವುದು ಸತ್ಯ, ಯಾವುದು ಮಿಥ್ಯ ಎಂಬುದು ಸಂವಿಧಾನದ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ಅಲ್ಲಿ ಯಾವುದೇ ತೀರ್ಮಾನ ಬಂದರೂ ಸಿ.ಟಿ.ರವಿ ಒಪ್ಪಿಕೊಳ್ಳುತ್ತಾರೆ. ಧರ್ಮಸ್ಥಳದ ಮಂಜುನಾಥನನ್ನು ಬಿಟ್ಟುಬಿಡಿ ಎಂದು ಹೇಳಿದರು.

ತನಿಖೆ ನಡೆಸಲು ಸಾಧ್ಯವಿಲ್ಲ : ಬೊಮ್ಮಾಯಿ
ಸದನದಲ್ಲಿ ನಡೆದ ಪ್ರಕರಣ ಸಂಬಂಧ ಪೊಲೀಸ್‌ ಆಗಲಿ, ಸಿಐಡಿಯಾಗಲಿ ತನಿಖೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ ಕೂಡಾ ಈ ವಿಚಾರದಲ್ಲಿ ತೀರ್ಪು ನೀಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಸದನದಲ್ಲಿ ನಡೆದ ಪ್ರಕರಣ ಮುಗಿದ ಅಧ್ಯಾಯ ಎಂದು ಸಭಾಪತಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ರವಿಯವರನ್ನು ಬಂಧಿಸಿ, ಸುತ್ತಾಡಿಸಿ ಹಿಂಸೆಕೊಟ್ಟಿದ್ದರ ಬಗ್ಗೆ ತನಿಖೆಯಾಗಬೇಕು. ರವಿ ನೀಡಿದ ದೂರಿನಲ್ಲಿ ಹಲ್ಲೆ ಮಾಡಲು ಯತ್ನಿಸಿದವರು ಯಾರು? ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಪೊಲೀಸರು ಅಪರಿಚಿತ ವ್ಯಕ್ತಿಗಳು ಎಂದು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ತನಿಖೆ ಪಕ್ಷಪಾತವಾಗಿ ಸಾಗುತ್ತಿದೆ. ಈ ದೃಷ್ಟಿಯಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next