Advertisement

ಯಡಿಯೂರಪ್ಪ ಅವರ ಹತ್ಯೆಗೂ ಕಾಂಗ್ರೆಸ್‌ ಯತ್ನಿಸಿತ್ತು

12:27 AM Mar 12, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ನವರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಬಗ್ಗೆ ಮರುಕದ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಒಂದು ಕಾಲದಲ್ಲಿ ಕಾಂಗ್ರೆಸಿ
ಗರು ಯಡಿಯೂರಪ್ಪನವರನ್ನು ಸೋಲಿಸುವುದಕ್ಕೆ ಮಾತ್ರವಲ್ಲ ಕೊಲ್ಲುವು ದಕ್ಕೂ ಪ್ರಯತ್ನಿಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿ¨ªಾರೆ. “ಉದಯವಾಣಿ’ಗೆ ನೀಡಿದ “ನೇರಾನೇರ’ ಸಂದರ್ಶನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಬಿಜೆಪಿ ಅನ್ಯಾಯ ಮಾಡಿತು ಎಂದು ವಾದಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ಸಂದರ್ಶನದ ಪೂರ್ಣಪಾಠ ಹೀಗಿದೆ…
ಚುನಾವಣೆ ಸಮಯದಲ್ಲಿ ಯಡಿಯೂರಪ್ಪನವರಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ಏಕೆ?
ಯಡಿಯೂರಪ್ಪನವರು ನಮ್ಮ ಅಗ್ರಗಣ್ಯ ನಾಯಕರು. ಅವರು ಚುನಾವಣೆ ರಾಜಕಾರಣದಿಂದ ನಿವೃತ್ತಿ ಪಡೆದಿದ್ದಾರೆಯೇ ವಿನಃ ಸಕ್ರಿಯ ರಾಜಕಾರಣದಿಂದ ಅಲ್ಲ. ನಮ್ಮದು ಜಾತಿಯನ್ನು ಮೀರಿದ ರಾಷ್ಟ್ರೀಯ ವಾದವನ್ನೇ ಉಸಿರಾಗಿಸಿಕೊಂಡ ಪಕ್ಷ. ಯಡಿಯೂರಪ್ಪ ಅದೇ ಸಂಸ್ಕಾರದಲ್ಲಿ ಬೆಳೆದು ಬಂದಿದ್ದಾರೆ. ಅವರು ರಾಜ್ಯದಲ್ಲಿ ಪಕ್ಷ ಬೆಳೆಸಿದ್ದಾರೆ. ಪಕ್ಷದಿಂದ ಅವರು ಬೆಳೆದಿದ್ದಾರೆ.

ಹಾಗಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದೇಕೆ? ಕಾಂಗ್ರೆಸ್‌ ಇದೇ ಪ್ರಶ್ನೆ ಕೇಳುತ್ತಾ ಇದೆ.
ಒಂದು ಕಾಲದಲ್ಲಿ ಕಾಂಗ್ರೆಸ್‌ನವರು ಯಡಿಯೂರಪ್ಪ ಅವರನ್ನು ಸೋಲಿಸಲು ಮಾತ್ರವಲ್ಲ, ಕೊಲ್ಲಲೂ ಯತ್ನಿಸಿದ್ದರು. ಈ ಹಿಂದೆ ಬಂದೀಖಾನೆ ಸಚಿವರಾಗಿದ್ದ ವೆಂಕಟಪ್ಪನವರ ಬೆಂಬಲಿಗರು ಯಡಿಯೂರಪ್ಪನವರ ಕೊಲೆ ಪ್ರಯತ್ನ ನಡೆಸಿದ್ದು ಸುಳ್ಳೇ? ಯಡಿಯೂರಪ್ಪ 4 ಬಾರಿ ಮುಖ್ಯ ಮಂತ್ರಿಯಾಗಿದ್ದು, ಕಾಂಗ್ರೆಸ್‌ ಬೆಂಬಲದಿಂದಲ್ಲ, ವಿಪಕ್ಷ ನಾಯಕರಾಗಿದ್ದು ಅವರ ಕರುಣೆಯಿಂದಲ್ಲ, ಉಪಮುಖ್ಯಮಂತ್ರಿಯಾಗಿದ್ದು ಅವರ ಕೃಪೆಯಿಂದಲ್ಲ. ಅವರು ಬೆಳೆದು ಬಂದಿದ್ದೇ ಕಾಂಗ್ರೆಸ್‌ ವಿರೋಧಿ ಹೋರಾಟದಿಂದ. ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್‌ನವರು ಮರುಕದ ಮಾತನಾಡುವ ಅಗತ್ಯವಿಲ್ಲ.

– ಆದಾಗಿಯೂ ಬಿಜೆಪಿಯಲ್ಲಿ ಒಂದು ಏಕಸೂತ್ರದಲ್ಲಿ ಹಿಡಿದಿಡುವ ನಾಯಕತ್ವದ ಕೊರತೆ ಇದೆ ಎಂದು ಅನಿಸದೇ?
ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿಸಿಡುವುದಕ್ಕೆ ಸೈದ್ಧಾಂತಿಕತೆಯಿಂದ ಮಾತ್ರ ಸಾಧ್ಯ. ಸಿದ್ಧಾಂತ ಬದ್ಧತೆ ಇರುವ ಕಡೆ ಗೊಂದಲಕ್ಕೆ ಆಸ್ಪದ ಇರುವುದಿಲ್ಲ. ಲಾಭ-ನಷ್ಟದ ಲೆಕ್ಕಾಚಾರ ಹಾಕುವವರು, ನನಗೆ ಸಿಕ್ಕಿದರೆ ಮಾತ್ರ ಸಿದ್ಧಾಂತ ಎನ್ನುವವರು ಮಾತ್ರ ಗೊಂದಲ ಸೃಷ್ಟಿಸಬಹುದು. ಬಿಜೆಪಿಯಲ್ಲಿರುವ ಶೇ. 90ರಷ್ಟು ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ನಿರ್ಣಯವನ್ನು ತಮ್ಮದೇ ನಿರ್ಧಾರ ಎಂದು ಪಾಲಿಸುತ್ತಾರೆ. ಯೋಗಾಯೋಗದಿಂದ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆಯ ಪ್ರಶ್ನೆ ಇದುವರೆಗೆ ಉದ್ಭವಿಸಿಲ್ಲ. ಡಬಲ್‌ ಎಂಜಿನ್‌ ಸರಕಾರಕ್ಕೆ ನಿರಾಯುಧವಾಗಿ ವಿಪಕ್ಷಗಳ ಅಪಪ್ರಚಾರವನ್ನು ಎದುರಿಸುವ ಶಕ್ತಿ ಇದೆ. ರಾಜ್ಯದ ಎಲ್ಲ ಭಾಗದಲ್ಲೂ ನಮ್ಮ ಪಕ್ಷದ ಬಗ್ಗೆ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸತ್ಯವಾದರೂ ನಾವು ಅದನ್ನು ದಾಟಿ ಮುಂದೆ ಸಾಗುತ್ತೇವೆ. ಇದೇ ಬಗೆಯ ಸ್ಥಿತಿ ಈ ಹಿಂದೆ ಚುನಾವಣೆ ಎದುರಿಸಿದ ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲೂ ಇತ್ತು. ಆದರೆ ಫ‌ಲಿತಾಂಶ ಎಲ್ಲದಕ್ಕೂ ಉತ್ತರ ನೀಡಿದೆ.

ಮಾಡಾಳು ವಿರೂಪಾಕ್ಷಪ್ಪ ಪ್ರಕರಣವನ್ನು ಬಿಜೆಪಿ ಮೌನವಾಗಿ ಸಹಿಸಿಕೊಳ್ಳುತ್ತಿದೆಯೇ?
ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಲ್ಲಿ ಪಕ್ಷದ್ದು ಮೌನ ನಿರ್ಣಯ ಎಂದು ವ್ಯಾಖ್ಯಾನಿಸಬೇಕಾಗಿಲ್ಲ. “ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂಬ ಪ್ರಧಾನಿ ಮೋದಿಯವರ ಘೋಷಣೆಗೆ ಬಿಜೆಪಿ ಈಗಲೂ ಬದ್ಧವಾಗಿದೆ. ಕೆಲವೊಮ್ಮೆ ಒಟ್ಟಾರೆ ಪರಿಣಾಮ ಯೋಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಮುನ್ನ ರೋಗಿಯ ರಕ್ತದೊತ್ತಡ, ಸಕ್ಕರೆ ಅಂಶವನ್ನು ಸಹಜ ಸ್ಥಿತಿಗೆ ತರುತ್ತಾರೆ. ಈ ಹಿಂದೆಯೂ ನಾವು ನಿರ್ಣಯ ಕೈಗೊಳ್ಳುವ ಸಂದರ್ಭ ಸಾಂವಿಧಾನಿಕ ಸಂಸ್ಥೆಗಳ ವರದಿಯನ್ನು ಆಧರಿಸಿ¨ªೆವು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಇದಕ್ಕೆ ಹಲವು ನಿದರ್ಶನ ನೀಡಬಹುದು. ವಿರೂಪಾಕ್ಷಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕೂಡ ಆ ಪ್ರಕ್ರಿಯೆಯ ಭಾಗವೇ ಆಗಿದೆ.

Advertisement

ಹಾಗಿದ್ದರೆ ಇನ್ನೂ ಬಿಪಿ-ಶುಗರ್‌ ಕಂಟ್ರೋಲ್‌ಗೆ ಬಂದಿಲ್ಲವೇ?
ಹೌದು. ಮಾಡಾಳು ವಿಚಾರದಲ್ಲಿ ಬಿಪಿ-ಶುಗರ್‌ ಕಂಟ್ರೋಲ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆಪರೇಷನ್‌ ಆಗಿಯೇ ಆಗುತ್ತದೆ. ನಮ್ಮ ಸಂಸದೀಯ ಮಂಡಳಿಯಲ್ಲಿ ಈ ಬಗ್ಗೆ ನಿಶ್ಚಿತವಾಗಿಯೂ ನಿರ್ಧಾರ ತೆಗೆದುಕೊಳ್ಳುತ್ತಾರೆ.

ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕೆಂಬ ಕೂಗು ಕೆಲವೆಡೆಯಿಂದ ಕೇಳಿಬರುತ್ತಿದೆ. ಹಾಗಿದ್ದರೆ ಈಗಿನ ಮಾದರಿ ಆಡಳಿತದ ಬಗ್ಗೆ ಅಸಮಾಧಾನ ಇದೆಯೇ?
ಒಂದೊಂದು ರಾಜ್ಯದ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ. ಉತ್ತರ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟು ಹೋಗಿತ್ತು. ಹೀಗಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೆಲವು ಕಠಿಣ ಕ್ರಮ ತೆಗೆದುಕೊಂಡರು. ರಾಜ್ಯದಲ್ಲಿ ಅಂಥ ಮಾಫಿಯಾ ವ್ಯವಸ್ಥೆ ಇಲ್ಲ. ಆದಾಗಿಯೂ ಕೆಲವೊಮ್ಮೆ ನಮ್ಮ ಕಾರ್ಯಕರ್ತರಿಗೆ “ಯೋಗಿ ಮಾದರಿ’ ಬೇಕೆಂದೆನಿಸುತ್ತದೆ. ಆದರೆ ಇಂಥ ಮಾದರಿ ಬಿಜೆಪಿಯಲ್ಲಿ ಮಾತ್ರ ಸೃಷ್ಟಿಯಾಗಲು ಸಾಧ್ಯ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಇಂಥದ್ದನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ? ಇರುವ ಚೌಕಟ್ಟಿನೊಳಗೇ ನಾವು ಉತ್ತಮ ಕೆಲಸ ಮಾಡಿದ್ದೇವೆ. ಆರಂಭಿಕ ದಿನದಲ್ಲಿ ಹಲವು ಪ್ರಯೋಗ ನಡೆಸಿದ ಬಳಿಕವೇ ಗುಜರಾತ್‌ನಲ್ಲಿ ಮೋದಿ ಮಾಡೆಲ್‌ ಸೃಷ್ಟಿಯಾಯಿತು. ಕರ್ನಾಟಕದಲ್ಲೂ ಈಗ ಅಂಥ ಪ್ರಯೋಗ ನಡೆಯುತ್ತಿದೆ. ವೈಚಾರಿಕವಾಗಿ ಗಟ್ಟಿಯಾಗುತ್ತಿದ್ದಂತೆ ಪ್ರಯೋಗ ನಡೆದೇ ನಡೆಯುತ್ತದೆ.

ಅವಕಾಶ ಸಿಕ್ಕರೆ ನೀವು ‘ಕರ್ನಾಟಕದ ಯೋಗಿ’ ಆಗ್ತಿರಾ ?
ಈ ಪ್ರಶ್ನೆಗೆ ನಾನು ಉತ್ತರ ನೀಡಿ ಗೊಂದಲ ಸೃಷ್ಟಿಸಲು ಬಯಸುವುದಿಲ್ಲ. ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ನಮ್ಮ ವರಿಷ್ಠರು ಈಗಾಗಲೇ ಘೋಷಣೆ ಮಾಡಿ¨ªಾರೆ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸುವ ಕಾರ್ಯಕರ್ತ ನಾನು.

ಕಾಂಗ್ರೆಸ್‌ನ ಯೋಜನಾಬದ್ಧ ಹೋರಾಟದ ಎದುರು ಬಿಜೆಪಿ ಸೊರಗಿದೆಯಾ?
ಕಾಂಗ್ರೆಸ್‌ ನಮ್ಮ ಸರಕಾರದ ವಿರುದ್ಧ ಯೋಜನಾಬದ್ಧ ಟೂಲ್‌ಕಿಟ್‌ ಅಪಪ್ರಚಾರ ನಡೆಸುತ್ತಿದೆ. ವಿಪಕ್ಷದಲ್ಲಿ ಇದ್ದವರಿಗೆ ಆರೋಪ ಮಾಡುವುದು ಸುಲಭ. ಕೆಲವೊಮ್ಮೆ ಆರೋಪ ಮಾಡಿದರಷ್ಟೇ ಸಾಕಾಗುತ್ತದೆ. ಆದರೆ ಈ ಆರೋಪಗಳೇ ಈಗ ಅವರಿಗೆ ತಿರುಗು ಬಾಣವಾಗುತ್ತಿವೆ. ಕಾಂಗ್ರೆಸ್‌ ಸೃಷ್ಟಿಸಿದ ಎಲ್ಲ ಗೊಂದಲಗಳನ್ನೂ ನಾವು ಬಗೆಹರಿಸಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ವಿಚಾರದಲ್ಲಿ ಕಾಂಗ್ರೆಸ್‌ ಸೃಷ್ಟಿಸಿದ ಗೊಂದಲಕ್ಕೆ ತೆರೆ ಎಳೆದಿದ್ದೇವೆ. 40 ಪರ್ಸೆಂಟ್‌ ಕಮಿಷನ್‌ ಆರೋಪದಲ್ಲೂ ಯಾವುದೇ ಹುರುಳಿಲ್ಲ.

ಬಿಜೆಪಿ ಸರಕಾರದ ಅವಧಿಯಲ್ಲಿ ಎಡವಟ್ಟುಗಳೇ ನಡೆದಿಲ್ಲವಾ ?
ರಾಜ್ಯದಲ್ಲಿ ಈಗ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಆದರೆ ಅದು ನಮ್ಮ ವೈಚಾರಿಕ ನೆಲೆಯಿಂದ ಅಸ್ತಿತ್ವಕ್ಕೆ ಬಂದ ಸರಕಾರವಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದಿಂದ ಅಭಿವೃದ್ಧಿ ಶೂನ್ಯತೆ ಸೃಷ್ಟಿಯಾಗಿತ್ತು. ಒಂದೇ ವರ್ಷದಲ್ಲಿ ಜನಾಕ್ರೋಶದ ಕಟ್ಟೆ ಒಡೆಯಿತು. ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟರು. ಹೀಗಾಗಿ ಆಡಳಿತಕ್ಕೆ ಸ್ಥಿರತೆ ಕೊಡಬೇಕೆಂದು ನಾವು ಸರಕಾರ ರಚಿಸಿದೆವು. ಅದರ ರಿಪೋರ್ಟ್‌ ಕಾರ್ಡ್‌ ಅನ್ನು ಜನರ ಮುಂದೆ ಇಡುತ್ತಿದ್ದೇವೆ. ಹಾಗೆಂದು ಈ ಅವಧಿಯಲ್ಲಿ ಅಪಸವ್ಯಗಳು ನಡೆದೇ ಇಲ್ಲ ಎಂದು ನಾನು ವಾದಿಸುವುದಿಲ್ಲ.

ಅಂದರೆ ಇದು ಬಿಜೆಪಿಯ ಮಾದರಿ ಸರಕಾರವಲ್ಲ?
ಹೌದು. ಇದು ನಮ್ಮ ಸಿದ್ಧಾಂತದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಪರಿಪೂರ್ಣ ಮಾದರಿ ಸರಕಾರವಲ್ಲ. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಿಂತಲೂ ಸುಧಾರಿತ ಮಾದರಿ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನೇ ಬುಡಮೇಲು ಮಾಡುವ ಭಂಡತನ ಇತ್ತು. ಎಲ್ಲ ಪ್ರಕರಣಗಳಿಗೂ ಕ್ಲೀನ್‌ಚಿಟ್‌ ಕೊಟ್ಟು ಬಚಾವಾದರು. ಆದರೆ ಆಡಳಿತ ಪಕ್ಷದ ಶಾಸಕನೇ ಆದರೂ ದೂರು ಬಂದಾಗ ನಾವು ಕ್ರಮ ತೆಗೆದುಕೊಂಡಿದ್ದೇವೆ.

ನಿಮ್ಮೊಳಗೂ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ ಎಂದ ಮೇಲೆ ಜನ ಏಕೆ ಬಿಜೆಪಿಗೆ ಮತ ಹಾಕಬೇಕು?
ಸ್ಥಳೀಯವಾಗಿ ಕೆಲವೆಡೆ ಬಿಜೆಪಿ ಶಾಸಕರ ಬಗ್ಗೆ ಅಪಸ್ವರ ಇರುವುದು ನಿಜವಾದರೂ ರಾಜ್ಯದ ನಾಲ್ಕು ದಿಕ್ಕಿನಿಂದ ಪ್ರಾರಂಭವಾಗಿರುವ “ವಿಜಯ ಸಂಕಲ್ಪ ಯಾತ್ರೆ’ ಯಶಸ್ವಿಯಾಗಿ ಸಾಗುತ್ತಿದೆ. ಪ್ರಧಾನಿ ಮೋದಿಯವರ ಮೇಲೆ ರಾಜ್ಯದ ಜನತೆ ಇನ್ನೂ ವಿಶ್ವಾಸ ಇಟ್ಟಿದ್ದಾರೆ. ಅದರಿಂದ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಮೋದಿ-ಯೋಗಿ ಮಾದರಿ ಸೃಷ್ಟಿ ಬಿಜೆಪಿಯಲ್ಲಿ ನಿರಂತರ ಪ್ರಕ್ರಿಯೆಯಾಗಿದ್ದು, ಜನರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹಾಗೂ ಕುಮಾರಸ್ವಾಮಿಯವರಿಗೆ ಹೋಲಿಕೆ ಮಾಡಿ ಬಿಜೆಪಿಗೆ ಮತ ನೀಡಬೇಕು. ವಿಧಾನಸೌಧಕ್ಕೆ ಬರದೇ ತಾಜ್‌ ವೆಸ್ಟ್‌ಎಂಡ್‌ನ‌ಲ್ಲಿ ಕುಳಿತು ಆಡಳಿತ ನಡೆಸಿದ ಕುಮಾರಸ್ವಾಮಿ, ದಾಷ್ಟéì ಹಾಗೂ ದುರಹಂಕಾರವೇ ಮೂರ್ತಿವೆತ್ತಂತೆ ಇರುವ ಶಿವಕುಮಾರ, ಹಿಂದುತ್ವದ ವಿರೋಧಿ ಸಿದ್ದರಾಮಯ್ಯಗಿಂತ ಬಿಜೆಪಿಯ ಆಡಳಿತವೇ ಉತ್ತಮವಾಗಿದೆ ಎಂಬುದನ್ನು ಮರೆಯಬಾರದು.

ಈ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲವೇ?
ಖಂಡಿತ; ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಜೆಡಿಎಸ್‌ ಬಯಸುವಂಥ “ವಿಚಿತ್ರ ಕೂಸು’ ಜನಿಸುವುದಿಲ್ಲ. ಸೌಷ್ಟವದಿಂದ ಮಿರುಗುವ ಮುದ್ದಾದ ಬಿಜೆಪಿಯ ಕೂಸು ಹುಟ್ಟುವುದರಲ್ಲಿ ಯಾವುದೇ ಅನುಮಾನ ಬೇಡ.

ನಿಮ್ಮನ್ನೂ ಸೇರಿ ಸಂಘ ಪರಿವಾರ ಹಿನ್ನೆಲೆಯ ನಾಯಕರ ಮಣಿಸುವ ಪ್ರಯತ್ನ ನಡೆದಿದೆ?
ರಾಜಕಾರಣದಲ್ಲಿ ಸೋಲಿನ ಭೀತಿ ಇರುವವರು ಸಮುದ್ರ ಸ್ನಾನಕ್ಕೆ ಇಳಿಯಬಾರದು. ಇದು ಬದುಕಿಗೂ ಅನ್ವಯಿಸುತ್ತದೆ. ಸಮುದ್ರ ಆಳವಾಗಿರುತ್ತದೆ; ಅಲೆ, ಅಬ್ಬರ, ತಿಮಿಂಗಿಲ, ಶಾರ್ಕ್‌ ಇರುತ್ತದೆ ಎಂದು ಭಯಪಟ್ಟರೆ ದಡದಲ್ಲಿ ಮಾತ್ರ ಕುಳಿತುಕೊಳ್ಳುವುದಕ್ಕೆ ಸಾಧ್ಯ. ಇವೆಲ್ಲದಕ್ಕೂ ಅಂಜುವುದಿಲ್ಲ ಎನ್ನುವವರು ಮಾತ್ರ ಸಮುದ್ರ ಸ್ನಾನ ಮಾಡುತ್ತಾರೆ. ನನ್ನನ್ನು ಸೇರಿದಂತೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಕೆಲವರನ್ನು ಸೋಲಿಸುವುದಕ್ಕೆ ಪ್ರಯತ್ನ ನಡೆಯುತ್ತಿರುವುದು ನಿಜ. ಆದರೆ ಇವೆಲ್ಲವನ್ನೂ ಮೀರಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ.

– ರಾಘವೇಂದ್ರ ಭಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next