ಪಂಚರಾಜ್ಯಗಳಲ್ಲಿ ಅತ್ಯಂತ ಪ್ರಮುಖ ರಾಜ್ಯ ಎಂದೇ ಬಿಂಬಿತವಾಗಿದ್ದ ಉತ್ತರ ಪ್ರದೇಶದಲ್ಲಿ ಇನ್ನೊಂದು ಹಂತದ ಚುನಾವಣೆ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಆರು ಹಂತದ ಮತದಾನ ಮುಗಿದಿದ್ದು, ಮಾ.7ರಂದು ಕಡೆಯ ಹಂತ ನಡೆಯಲಿದೆ. ಈ ರಾಜ್ಯದ ಚುನಾವಣ ಪ್ರಚಾರ ಕಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾಗಿಯಾಗಿದ್ದರು. ಶೋಭಾ ಅವರು ಅವಧ್ ಪ್ರಾಂತ್ಯದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು, ಇಲ್ಲಿನ ಸ್ಥಿಗತಿ ಬಗ್ಗೆ ತಮ್ಮದೇ ಮಾತುಗಳಲ್ಲಿ ಹೇಳಿದ್ದರೆ, ವಾರಾಣಸಿಯಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಸಿ.ಟಿ.ರವಿ ಅವರು ಅಲ್ಲಿನ ಜನರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಗೋವಾ ಚುನಾವಣ ಪ್ರಚಾರ ಮುಗಿದ ಅನಂತರ ಪಕ್ಷದ ನಾಯಕರ ಸೂಚನೆಯಂತೆ ಉತ್ತರ ಪ್ರದೇಶದ ವಾರಾಣಸಿ ವಿಭಾಗದಲ್ಲಿ ಚುನಾವಣ ಪ್ರಚಾರ ಮಾಡುತ್ತಿದ್ದೇನೆ. ವಾರಾಣಸಿಯಲ್ಲಿ ದಕ್ಷಿಣ ಭಾರತದ ಜನರು ಹೆಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇಲ್ಲಿ ಸಿಎಂ ಯೋಗಿ ಆದಿತ್ಯನಾಥ ಮತ್ತು ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿಗಳು. ನಾವು ಟ್ರೈಬಲ್ ಪ್ರದೇಶಗಳಿಗೆ ಹೋದಾಗಲೂ ಅಲ್ಲಿ ಅಭ್ಯರ್ಥಿಗಳಿಗಿಂತಲೂ ಯೋಗಿ- ಮೋದಿ ಪರಿಚಯ ಇದೆ. ಅವರಿಗೆ 2 ವರ್ಷದಿಂದ ಉಚಿತ ಅಕ್ಕಿ ಕೊಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ ಎನ್ನುವ ಅಭಿಮಾನ ಹೆಚ್ಚಿದೆ. ಅಲ್ಲಿ ಬುಲ್ಡೋಜರ್ ಎಷ್ಟು ಫೇಮಸ್ ಆಗಿದೆಯಂದರೆ ಬುಲ್ಡೋಜರ್ ಹೆಸರು ಹೇಳಿದರೆ. ಅಲ್ಲಿನ ಜನರು ಚಪ್ಪಾಳೆ ತಟ್ಟುತ್ತಾರೆ. ಅಕ್ರಮವಾಗಿ ಅತಿಕ್ರಮಣ ಮಾಡಿದವರ ಒತ್ತುವರಿ ತೆರವು ಮಾಡಿದ್ದು, ರೌಡಿಶೀಟರ್‌ಗಳನ್ನೆಲ್ಲ ಒಳಗೆ ಹಾಕಿರೋದು ಜನರಿಗೆ ಹೆಚ್ಚು ಖುಷಿ ತಂದಿದೆ. ನಮ್ಮ ದೇಶದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತ ಎಂದು ಭಾವನೆಗಳ ವಿಚಾರದಲ್ಲಿ ಅಂತಹ ವ್ಯತ್ಯಾಸವಿಲ್ಲ. ಅಲ್ಲೂ ಜಾತಿ ರಾಜಕಾರಣ ಇದೆ. ಜಾತಿ ಪ್ರಭಾವವೂ ಇದೆ. ಅಲ್ಲಿನ ಜನರು ಮುಗªರು, ಅಲ್ಲಿನ ಚುನಾವಣ ವೆಚ್ಚ ದಕ್ಷಿಣ ಭಾರತಕ್ಕಿಂತ ಕಡಿಮೆ. ಜನರಿಗೆ ವ್ಯಕ್ತಿಯ ಬಗ್ಗೆ ನಂಬಿಕೆ ಬಂದರೆ, ಅವರಾಗಿಯೇ ಅವರನ್ನು ಗೆಲ್ಲಿಸಿಕೊಂಡು ಬರುತ್ತಾರೆ.
ನಾನು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೊದಲು ನಾಯಕರು, ಕಾರ್ಯಕರ್ತರ ನಡುವೆ ಸಮನ್ವಯ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಪ್ರಚಾರ ತಂತ್ರದ ಬಗ್ಗೆ ಪ್ಲ್ರಾನಿಂಗ್ ಮಾಡುವ ಕೆಲಸಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ.
ಅದರ ಹೊರತಾಗಿಯೂ ಅನುಭವದ ದೃಷ್ಠಿಯಿಂದ ಜನರ ಬಳಿ ತೆರಳಿ ಪ್ರಚಾರದಲ್ಲಿ ತೊಡಗಿಕೊಂಡಿದ್ದೇವೆ. ವಾರಾಣಸಿಯಲ್ಲಿ ಭೋಜಪುರಿ ಹಿಂದಿ ಒಂದು ರೀತಿ ಎಳೆದು ಮಾತನಾಡುತ್ತಾರೆ. ನಮ್ಮ ಹಿಂದಿ ಭಾಷೆ ನೋಡಿ ನಗುತ್ತಿದ್ದರು. ನಮ್ಮದು ಪುಸ್ತಕದ ಹಿಂದಿ, ಅದನ್ನು ಕೇಳಿ ಚಪ್ಪಾಳೆ ಹೊಡೆಯುತ್ತಾರೆ. ಅಂದ ಮೇಲೆ ನಮ್ಮ ಹಿಂದಿ ಅವರಿಗೆ ಅರ್ಥವಾಗಿದೆ ಅಂತ ಅರ್ಥ.
ಅಭಿವೃದ್ಧಿ ಕಾಣಿಸುತ್ತಿದೆ: ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ, ಉತ್ತರ ಪ್ರದೇಶ ಇನ್ನೂ ಅಭಿವೃದ್ದಿ ಆಗಬೇಕು. ಯೋಗಿ ಆದಿತ್ಯನಾಥ ಅಧಿಕಾರ ಬಂದ ಮೇಲೆ 15000 ಕಿ.ಮೀ. ರಸ್ತೆ ಅಭಿವೃದ್ಧಿ ಆಗಿದೆ. ಸುಮಾರು 33 ವೈದ್ಯಕೀಯ ಕಾಲೇಜು ಕೊಟ್ಟಿದ್ದಾರೆ. ಅಬೆಲೆಲ್ಲಿ 16 ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಕ್ರೀಡಾ ವಿಶ್ವ ವಿದ್ಯಾನಿಲಯ ಮಾಡಿದ್ದಾರೆ. ಆರು ಹೊಸ ಏರ್‌ಪೋರ್ಟ್ ಮಂಜೂರಾಗಿ ಎರಡು ಏರ್‌ಪೋರ್ಟ್ ಈಗಾಗಲೇ ಸ್ಟಾರ್ಟ್ ಆಗಿವೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ನದಿ ಜೋಡಣೆ ಯೋಜನೆಗೆ ಒತ್ತು ಕೊಟ್ಟಿರುವುದು ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ.
ಆರೋಗ್ಯದ ದೃಷ್ಟಿಯಿಂದ ಮಿತ ಆಹಾರ: ಉತ್ತರ ಪ್ರದೇಶದಲ್ಲಿ ರೋಟಿ, ಕುಲ್ಚಾ ಸಾಮಾನ್ಯ, ಮೊಸರು, ಹಾಲು, ತರಕಾರಿ ಹೆಚ್ಚಾಗಿ ಉಪಯೋಗಿಸುತ್ತಾರೆ. ನಾವು ನಮ್ಮ ಆರೋಗ್ಯ ಕೆಡಬಾರದು ಅನ್ನುವ ಕಾರಣಕ್ಕೆ ಲಿಮಿಟೆಡ್ ಆಹಾರ ತೆಗೆದುಕೊಳ್ಳುತ್ತಿದ್ದೆ. ಅನ್ನ ಮಾಮೂಲಿ ಅಂತಹ ವ್ಯತ್ಯಾಸ ಏನೂ ಇಲ್ಲ. ನನಗೇನು ಆಹಾರದ ಸಮಸ್ಯೆ ಆಗಲಿಲ್ಲ.
ವಾತಾವರಣದ ದೃಷ್ಟಿಯಿಂದ ಈಗ ಅಲ್ಲಿ ಅತಿಯಾದ ಚಳಿಯೂ ಇಲ್ಲ. ಅತಿಯಾದ ಸೆಕೆಯೂ ಇಲ್ಲ. ಮುಂದಿನ ತಿಂಗಳಿಂದ ಬೇಸಗೆ ಹೆಚ್ಚಾಗುವ ಸಾಧ್ಯತೆ ಇದೆ. ಯೋಗಿ ಮತ್ತು ಮೋದಿಗೆ ಯಾವುದೇ ಸ್ವಾರ್ಥ ಇಲ್ಲ. ಅವರಿಗೆ ಭ್ರಷ್ಟಾಚಾರ ಮತ್ತು ಸ್ವಾರ್ಥದ ಕಳಂಕ ತಗಲಿಲ್ಲ. ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಿಯಾಂಕಾ ಗಾಂಧಿ ಸೌಂಡ್ ಮಾಡುತ್ತಿದ್ದಾರೆ. ಆದರೆ ಗ್ರೌಂಡ್‌ನಲ್ಲಿ ಏನೂ ಇಲ್ಲ. ಮಾಯಾ ವತಿಯವರು ತಮ್ಮ ಲಿಮಿಟೆಡ್ ಓಟ್ ಬ್ಯಾಂಕ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಎಸ್ಪಿ ನಡುವೆ ನೇರ ಫೈಟ್ ಇದೆ. ಆದರೆ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲು ತೊಂದರೆ ಇಲ್ಲ.
-ಸಿ.ಟಿ.ರವಿ