ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯ ಜೀವನದಲ್ಲಿ ಕ್ಷೇತ್ರ ಹುಡುಕುತ್ತಿರುವುದು ದುರಂತದ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮೈಸೂರಿನಲ್ಲಿ ಅವರಿಗೆ ಗೆಲ್ಲುವ ವಿಶ್ವಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಚಾಮುಂಡೇಶ್ವರಿಯಲ್ಲಿ ಸೋಲಿನ ಬಳಿಕ ಅವರು ಅಲ್ಲಿ ಗೆಲ್ಲುವ ವಿಶ್ವಾಸ ಕಳೆದುಕೊಂಡಿದ್ದಾರೆ. ಬಾದಾಮಿಯಲ್ಲಿ ಎರಡನೇ ಬಾರಿ ಗೆಲ್ಲುತ್ತೇನೆಂಬ ವಿಶ್ವಾಸ ಅವರಿಗಿಲ್ಲ ಎಂದರು.
ಕಾಂಗ್ರೆಸ್ ಹಮ್ಮಿಕೊಂಡಿರುವ ಬಸ್ ಯಾತ್ರೆಗೆ ಸಿದ್ದರಾಮಯ್ಯ ಪೊರಕೆಯಲ್ಲಿ ಗುಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಅನ್ನು ದೇಶದ ಜನರು ಗುಡಿಸುತ್ತಿದ್ದಾರೆ. ಅವರು ಅ ಧಿಕಾರದಲ್ಲಿದ್ದ ರಾಜ್ಯಗಳನ್ನೂ ಜನರು ಗುಡಿಸುತ್ತಿದ್ದಾರೆ. ಸ್ಯಾಂಟ್ರೋ ರವಿ ಬಿಜೆಪಿಯಲ್ಲಿದ್ದರೋ ಇಲ್ವೋ ಎಂಬ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲ ಎಂದರು.
ಬಿಜೆಪಿಯವರಿಗೊಂದು ಕಾಂಗ್ರೆಸ್‌ನವರಿಗೊಂದು ಕಾನೂನು ಇಲ್ಲ. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಶಿಕ್ಷೆಯಾಗಲೇಬೇಕು. ಪೊಲೀಸ್ ತನಿಖೆ ಬಳಿಕ ಅವರ ಹಿಂದೆ ಯಾರಿದ್ದಾರೆ. ಯಾವ ಪಕ್ಷ ಇದೆ ಎಂಬುದು ಗೊತ್ತಾಗುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವ ಅಥವಾ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದರು.
Related Articles
ಲಕ್ಷ್ಮಣ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರವಿ
ಚಿಕ್ಕಮಗಳೂರು: ತನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದಿಸಿದ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಅವರು ಗುರುವಾರ ನಗರದ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಗುರುವಾರ ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ತೆರಳಿದ ಸಿ.ಟಿ.ರವಿ, ದಾಖಲೆಗಳೊಂದಿಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಜ. 21ರಂದು ಸಿ.ಟಿ.ರವಿ ಹಾಗೂ ಸಾಕ್ಷಿದಾರರಿಗೆ ಹೇಳಿಕೆ ಪಡೆಯಲು ನ್ಯಾಯಾಲಯ ದಿನ ನಿಗದಿಮಾಡಿದೆ.