ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳ ಉನ್ನತ ಸಂಸ್ಥೆಯಾದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್)ಯ ಪ್ರಧಾನ ನಿರ್ದೇಶಕ ಹುದ್ದೆಗೆ ಮಹಿಳೆ ನೇಮಕಗೊಂಡಿದ್ದಾರೆ.
ತಮಿಳುನಾಡಿನ ಹಿರಿಯ ವಿಜ್ಞಾನಿ ನಲ್ಲಥಂಬಿ ಕಲೈಸೆಲ್ವಿ ಅವರೇ ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ. ಇವರು ದೇಶಾದ್ಯಂತ ಇರುವ 38 ಸಂಶೋಧನಾ ಸಂಸ್ಥೆಗಳ ಒಕ್ಕೂಟವನ್ನು ಮುನ್ನಡೆಸಲಿದ್ದಾರೆ.
ಲೀಥಿಯಂ ಅಯಾನ್ ಬ್ಯಾಟರಿ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವ ಕಲೈಸೆಲ್ವಿ ಪ್ರಸ್ತುತ ತಮಿಳುನಾಡಿನ ಕಾರೈಕುಡಿಯ ಸಿಎಸ್‌ಐಆರ್- ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿದ್ದಾರೆ.
ಸಿಎಸ್‌ಐಆರ್ ಪ್ರಧಾನ ನಿರ್ದೇಶಕರಾಗಿದ್ದ ಶೇಖರ್ ಮಂಡೆ ಅವರು ಏಪ್ರಿಲ್‌ನಲ್ಲಿ ನಿವೃತ್ತಿಯಾಗಿದ್ದರು. ನಂತರ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ರಾಜೇಶ್ ಗೋಖಲೆ ಅವರಿಗೆ ಸಿಎಸ್‌ಐಆರ್‌ನ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿತ್ತು. ಈಗ ಕಲೈಸೆಲ್ವಿ ಅವರು ಸಂಸ್ಥೆಯ ಪ್ರಧಾನಿ ನಿರ್ದೇಶಕ ಹುದ್ದೆಯ ಜೊತೆಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.
2 ವರ್ಷಗಳ ಸೇವಾವಧಿ:
ಅಧಿಕಾರ ವಹಿಸಿಕೊಂಡ ದಿನದಿಂದ 2 ವರ್ಷಗಳವರೆಗೆ ಅವರ ಸೇವಾವಧಿ ಇರಲಿದೆ. ಎಲೆಕ್ಟ್ರಿಕ್ ಮೊಬಿಲಿಟಿಗೆ ಸಂಬಂಧಿಸಿದ ರಾಷ್ಟ್ರೀಯ ಯೋಜನೆಗೂ ಕಲೈಸೆಲ್ವಿ ಅವರು ಗಣನೀಯ ಕೊಡುಗೆ ನೀಡಿದ್ದಾರೆ. ಅವರ ಹೆಸರಲ್ಲಿ 125ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿದ್ದು, 6 ಪೇಟೆಂಟ್‌ಗಳೂ ಅವರ ಹೆಸರಲ್ಲಿವೆ.