Advertisement

ಸಿಆರ್‌ಝಡ್‌ ಮರಳು ಮಾರುವಂತಿಲ್ಲ: ರಾಷ್ಟ್ರೀಯ ಹಸುರು ಪೀಠ ಆದೇಶ

12:39 AM May 21, 2022 | Team Udayavani |

ಉಡುಪಿ: ಸಿಆರ್‌ಝಡ್‌ ಪ್ರದೇಶದಲ್ಲಿ ತೆಗೆದ ಮರಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ಈ ಮರಳನ್ನು ಮಾರಾಟ ಮಾಡುವಂತಿಲ್ಲ ಎಂದು ಮೇ 18ರಂದು ರಾಷ್ಟ್ರೀಯ ಹಸುರು ಪೀಠ (ಎನ್‌ಜಿಟಿ) ಆದೇಶಿಸಿದೆ.

Advertisement

ಚೆನ್ನೈಯಲ್ಲಿರುವ ಎನ್‌ಜಿಟಿ ದಕ್ಷಿಣ ಪೀಠದ ನ್ಯಾಯಾಂಗ ಸದಸ್ಯ ಕೆ. ರಾಮಕೃಷ್ಣನ್‌, ತಜ್ಞ ಸದಸ್ಯ ಡಾ| ಸತ್ಯಗೋಪಾಲ ಕೊರ್ಲಪಾಟಿ ಅವರಿದ್ದ ಪೀಠವು ಪರ್ಮಿಟ್‌ ಪ್ರಕ್ರಿಯೆ, ರಾಜಧನ ಸಂಗ್ರಹ, ಹೊರಗಡೆ ಮರಳು ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರಕಾರದ ನಿಯಮಾವಳಿಯೂ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ನಿಷೇಧಿಸಲಾದ ಮರಳು ಗಣಿಗಾರಿಕೆಗೆ ಸಮವಾಗಿದೆ ಎಂದಿದೆ.

ಸಿಆರ್‌ಝಡ್‌ ಪ್ರದೇಶದಲ್ಲಿ ಮರಳು ತೆಗೆಯು ವುದೇ ಆದಲ್ಲಿ ಅದನ್ನು ಮಾರಾಟ ಮಾಡುವಂತಿಲ್ಲ. ತೆಗೆದ ಮರಳನ್ನು ಕೇವಲ ನದಿಯ ಪಾತ್ರವನ್ನು ಸಮತಟ್ಟು ಮಾಡಲು ಅಥವಾ ನದಿಪಾತ್ರದ ದಂಡೆ ಗಟ್ಟಿಗೊಳಿಸಲು ಬಳಸಬೇಕು ಎಂದು ಸೂಚಿಸಿದೆ.

ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಮರಳು ತೆಗೆಯಬೇಕು. ಯಾವುದೇ ಉಪಗುತ್ತಿಗೆ ಅಥವಾ ಬಾಹ್ಯ ಕಾರ್ಮಿಕರ ನಿಯೋಜನೆ ಇರಬಾರದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.

ಬ್ರಹ್ಮಾವರದ ಉದಯ ಸುವರ್ಣ,ಕಲ್ಯಾಣಪುರದ ದಿನೇಶ್‌ ಕುಂದರ್‌ ಎಂಬ ಅರ್ಜಿದಾರರು ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿ ಸೌಪರ್ಣಿಕಾ, ವಾರಾಹಿ, ಪಾಪನಾಶಿನಿ, ಸ್ವರ್ಣ, ಸೀತಾ, ಯಡಮಾವಿನ ಹೊಳೆ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ.

Advertisement

ಜಿಲ್ಲಾಡಳಿತ ಎನ್‌ಜಿಟಿ ಆದೇಶ ಪಾಲನೆ ಮಾಡದೆ ಪರಿಸರಕ್ಕೆ ಸಾಕಷ್ಟು ಹಾನಿ ಮಾಡಿದೆ ಎಂದು ದೂರಲಾಗಿತ್ತು. ಅರ್ಜಿದಾರರ ಪರವಾಗಿ ಬೆಂಗಳೂರಿನ ನ್ಯಾಯವಾದಿ ರಂಜನ್‌ ಶೆಟ್ಟಿ ವಾದ ಮಂಡಿಸಿದ್ದರು.

ನದಿಯ ಹರಿಯುವಿಕೆಗೆ ಸಮಸ್ಯೆಯಾಗುವುದು ಮತ್ತು ಮೀನುಗಾರಿಕೆ ದೋಣಿಗಳ ಚಲನೆಗೆ ಸಮಸ್ಯೆಯಾಗುತ್ತದೆ. ಮರಳನ್ನು ತೆಗೆಯದೇ ಇದ್ದಲ್ಲಿ ಪ್ರವಾಹ ಮತ್ತು ನೆರೆ ಉಂಟಾಗಲು ಕಾರಣವಾಗುತ್ತದೆ ಎಂಬ ವಾದವನ್ನು ಜಿಲ್ಲೆಯ ಸಿಆರ್‌ಝಡ್‌ ಮರಳು ಪರವಾನಿಗೆದಾರರ ಪರ ವಕೀಲರು ಮಂಡಿಸಿದ್ದಾರೆ.

23 ಮರಳು ದಿಬ್ಬ
ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 23 ಮರಳು ದಿಬ್ಬವನ್ನು ಗುರುತಿಸಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದಿಸಿತ್ತು. ಅದರಲ್ಲಿ 4 ಮರಳು ದಿಬ್ಬಗಳು ಕುಂದಾಪುರ ವ್ಯಾಪ್ತಿಯಲ್ಲಿ ಅದರ ಪರವಾನಿಗೆ ಅವಧಿ ಪೂರ್ಣಗೊಂಡಿದೆ. ಪ್ರಸ್ತುತ ಉಡುಪಿ, ಬ್ರಹ್ಮಾವರ ಭಾಗದಲ್ಲಿ 19 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲಾಗುತ್ತಿದೆ.

ಸಿಆರ್‌ಝಡ್‌ ವ್ಯಾಪ್ತಿ ಮರಳು ತೆಗೆಯುವ ವಿಚಾರವಾಗಿ ಹಸುರು ಪೀಠ ನೀಡಿದ ಆದೇಶದ ಪ್ರಮಾಣಿಕೃತ ಪ್ರತಿ ಪಡೆದುಕೊಳ್ಳಬೇಕಿದೆ. ಈ ಆದೇಶವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ.
ಕೂರ್ಮಾ ರಾವ್‌ ಎಂ,
ಉಡುಪಿ ಜಿಲ್ಲಾಧಿಕಾರಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next