Advertisement
ಇತ್ತೀಚೆಗೆ ಇನ್‌ಸ್ಟ್ರಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ 20 ನಿಮಿಷದಲ್ಲಿ ಶೇ.60 ಲಾಭ ಪಡೆಯಬಹುದು ಎಂದು ಜಾಹೀರಾತು ನೀಡಿ ವಂಚಿಸುತ್ತಿದ್ದ ಬೆಳಗಾವಿ ಮೂಲದ ಇಬ್ಬರು ವಿದ್ಯಾರ್ಥಿಗಳು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Related Articles
Advertisement
ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಆಮಿಷಗಳಾಗಲಿ, ಹಣ ಹೂಡಿಕೆ ಯೋಜನೆಗಳ ಜಾಹೀರಾತು ಬಂದರೆ ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮಾ.17ರಂದು ಯಲಹಂಕ ಅಭಿನ್ ಶಹದ್ ಎಂಬವರು ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಆರೋಪಿಗಳ ಖಾತೆಯಲ್ಲಿದ್ದ ಜಾಹೀರಾತು ಗಮನಿಸಿದ್ದರು. ಜಾಹಿರಾತಿನಲ್ಲಿದ್ದ ನಂಬರ್‌ಗೆ ಕರೆ ಮಾಡಿ ಆರೋಪಿಗಳನ್ನು ಸಂಪರ್ಕಿಸಿದಾಗ ಹಣ ಹೂಡಿಕೆ ಮಾಡಿದ 20 ನಿಮಿಷದಲ್ಲಿ ಶೇ.60 ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಆರೋಪಿಗಳ ಇನ್ ಸ್ಟ್ರಾಗ್ರಾಂ ಖಾತೆಯಲ್ಲಿ 10 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇರುವುದನ್ನು ಗಮನಿಸಿದ ದೂರುದಾರರು ಅವರ ಮಾತು ನಂಬಿ, ಆರೋಪಿಗಳ ಕಳುಹಿಸಿದ ಲಿಂಕ್ ಮೂಲಕ ಆನ್‌ಲೈನ್‌ನಲ್ಲೇ 26 ಸಾವಿರ ರೂ. ಆರೋಪಿಗಳ ಖಾತೆಗೆ ಹಾಕಿದ್ದರು. ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಟವರ್ ಲೊಕೇಶನ್ ಹಾಗೂ ಇತರೆ ತಾಂತ್ರಿಕ ಮಾರ್ಗದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:2.4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಕಮೆಂಟ್ಸ್ ನಂಬಬೇಡಿ
ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಹಾಗೂ ಇತರೆಡೆ ಆನ್‌ಲೈನ್ ಹೂಡಿಕೆ ಬಗ್ಗೆ ನೀಡುವ ಜಾಹೀರಾತು ಮತ್ತು ಆ ನಿರ್ದಿಷ್ಟ ಖಾತೆಗಳ ಫಾಲೋವರ್ಸ್, ಕಮೆಂಟ್ಸ್‌ಗಳನ್ನು ಸಾರ್ವಜನಿಕರು ನಂಬಬಾರದು ಎಂದು ಸೆನ್ ಠಾಣೆ ಪೊಲೀಸರು ಮನವಿ ಮಾಡಿ ದ್ದಾರೆ. ಹೆಚ್ಚು ಫಾಲೋವರ್ಸ್ ಹಾಗೂ ಉತ್ತಮ ಕಮೆಂಟ್ಸ್ ಹಾಕಿದ ಮಾತ್ರಕ್ಕೆ ಆ ಖಾತೆ ಅಸಲಿ ಆಗಿರುವುದಿಲ್ಲ ಎಂದು ಸೆನ್ ಠಾಣೆ ಪೊಲೀಸರು ತಿಳಿಸಿದರು.
ವಂಚನೆಗೊಳಗಾಗಿದ್ದರು!
ಆರೋಪಿಗಳ ಪೈಕಿ ಆರ್ಶದ್ ಮೊಹಿದ್ದೀನ್ ಬಿ.ಎ. ವ್ಯಾಸಂಗ ಮಾಡಿದ್ದು, ಕಿರಣ್ ಭರತೇಶ್ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಡಿಜಿಟಲ್ ಕರೆನ್ಸಿ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳು, ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್‌ನಲ್ಲಿ ಹಣ ಹೂಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಇನ್‌ಸ್ಟಾಗ್ರಾಂನಲ್ಲಿದ್ದ ಜಾಹೀರಾತುು ಗಮನಿಸಿ, 4 ಸಾವಿರ ರೂ. ಅಪರಿಚಿತರ ಬ್ಯಾಂಕ್ ಖಾತೆಗೆ ಹಾಕಿ ವಂಚನೆಗೊಳಗಾಗಿದ್ದರು. ಬಳಿಕ ತಾವೂ ಇದೇ ಮಾದರಿಯಲ್ಲಿ ವಂಚಿಸೋಣ ಎಂದು ಸಂಚು ರೂಪಿಸಿ, ಗೂಗಲ್, ಯುಟ್ಯೂಬ್ ಹಾಗೂ ಇತರೆ ಮಾಧ್ಯಮಗಳ ಮೂಲಕ ತಿಳಿದು ವಂಚನೆಗೆ ಸಂಚು ರೂಪಿಸಿ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.