ಮಂಗಳೂರು: ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸುವ ಕ್ರಷರ್ ಜಲ್ಲಿಯ ಪೂರೈಕೆ ಎರಡು ವಾರಗಳಿಂದ ಸ್ಥಗಿತಗೊಂಡಿದ್ದು, ಕಟ್ಟಡ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾರದ ಪರಿಸ್ಥಿತಿ ತಲೆದೋರಿದೆ. ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ ಎಂದು ದ.ಕ. ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸರಕಾರದ ನಿಯಮಾವಳಿ ಮತ್ತು ಧೋರಣೆಯಿಂದ ಕ್ರಷರ್ ನಡೆಸಲು ತೊಂದರೆ ಮತ್ತು ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಲ್ಲಿ ಪೂರೈಕೆದಾರರು ರಾಜ್ಯಾದ್ಯಂತ ಎಲ್ಲ ಕ್ರಷರ್ ಅನ್ನು ಸ್ಥಗಿತಗೊಳಿಸಿದ್ದಾರೆ. ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಂಡು ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ವಲಯಗಳಲ್ಲಿ ಲಭ್ಯ ಇರುವ ಮರಳಿನ ಪೂರೈಕೆ ಕಳೆದ ಮೂರು ವರ್ಷಗಳಿಂದ ಅಸಮರ್ಪಕವಾಗಿದೆ. ಗುತ್ತಿಗೆದಾರರು ಕಾಳಸಂತೆಯಲ್ಲಿ ಅಧಿಕ ಮೊತ್ತ ನೀಡಿ ಖರೀದಿಸುವ ಸ್ಥಿತಿ ಬಂದಿದೆ. ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಮರಳಿನ ಪೂರೈಕೆಯ ವ್ಯವಸ್ಥೆಯನ್ನು ಕೂಡ ಸಮರ್ಪಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು.
ಅಸೋಸಿಯೇಶನ್‌ನ ದಿನಕರ್ ಸುವರ್ಣ, ಸತೀಶ್ ಕುಮಾರ್ ಜೋಗಿ, ದೇವಾನಂದ, ಸುರೇಶ್ ಜೆ. ಪತ್ರಿಕಾಗೋಷ್ಠಿಯಲ್ಲಿದ್ದರು.