Advertisement

ಕಾಗೆ ಮತ್ತು ಕೋಗಿಲೆ

11:54 AM Aug 16, 2018 | |

ಮರದ ಮೇಲೆ ದಟ್ಟಹಸಿರೆಲೆಗಳ ನಡುವೆ ಕಾಗೆ ಗೂಡು ಕಟ್ಟುತ್ತಿತ್ತು. ಅದನ್ನೇ ಹೊಂಚು ಹಾಕುತ್ತಾ ಕೋಗಿಲೆಯೊಂದು ಕಾದು ಕುಳಿತಿತ್ತು. ಗೂಡು ಕಟ್ಟಿ ಮುಗಿಸಿದ ಕಾಗೆ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಆಹಾರ ಹುಡುಕಲು ಕಾಗೆ ಹಾರಿ ಹೋದಾಗ ಕೋಗಿಲೆ ಮೆತ್ತಗೆ ಬಂದು ಮೊಟ್ಟೆ ಇಟ್ಟು ಪಲಾಯನಗೈದಿತು. ಹಿಂತಿರುಗಿ ಬಂದ ಕಾಗೆಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆಗಳಿದ್ದಿದ್ದು ಗಮನಕ್ಕೆ ಬರಲಿಲ್ಲ. 

Advertisement

ಕಾಗೆಯ ಕಾವಿನಿಂದ ಮೊಟ್ಟೆ ಒಡೆದು ಮರಿಗಳು ಹೊರಗೆ ಬಂದವು. ಕಾಗೆ ಎಲ್ಲ ಮರಿಗಳನ್ನು ನೋಡಿ ಖುಷಿಯಿಂದ ಸಂಭ್ರಮಪಟ್ಟಿತು. ಆಗಲೂ ಕೋಗಿಲೆ ಮರಿಯನ್ನು ಭೇದ ಮಾಡಲಿಲ್ಲ. ಎಲ್ಲವಕ್ಕೂ ಗುಟುಕು ತಂದು ನೀಡಿತು. ಮರಿಗಳೆಲ್ಲ ಬೆಳೆದು ಕೊಂಚ ದೊಡ್ಡವಾಗುವಷ್ಟರಲ್ಲಿ ಕೋಗಿಲೆ ತನ್ನ ಮರಿಗಳನ್ನು ಕರೆದೊಯ್ಯಲು ಬಂದಿತು. ಆಗ ಕಾಗೆಯ ಮರಿಗಳು ತಮ್ಮ ಸಹೋದರರನ್ನು ಯಾವುದೋ ದುಷ್ಟ ಪಕ್ಷಿಯೊಂದು ಹೊತ್ತೂಯ್ಯಲು ಬಂದಿದೆ ಎಂದು ತಿಳಿದು ಪ್ರತಿಭಟಿಸಿದವು.

ಹಾರಲು ಬಾರದಿದ್ದರೂ ಅವೆಲ್ಲವೂ ಕೋಗಿಲೆಯ ವಿರುದ್ಧ ತಿರುಗಿ ಬಿದ್ದವು. ಆಗ ಕೋಗಿಲೆ ಒಂದು ಮರಿಯನ್ನು ಗೂಡಿನಿಂದ ತಳ್ಳಿ ಹಾಕಿತು. ಮಿಕ್ಕ ಮರಿಗಳು ಹೆದರಿ ಹಿಂದೆ ಸರಿದವು.  ಕಡೆಗೂ ಕೋಗಿಲೆ ತನ್ನ ಮರಿಗಳನ್ನು ಅಲ್ಲಿಂದ ಹೊತ್ತೂಯ್ಯುವಲ್ಲಿ ಸಫ‌ಲವಾಯಿತು. ಕೋಗಿಲೆ ಮರಿಗಳು ಆದ ಘಟನೆಯೆಲ್ಲವನ್ನೂ ಪರಾಮರ್ಶಿಸಿದವು. ತನ್ನದಲ್ಲದೇ ಹೋದರೂ ಕಾಗೆ ಕಾವು ಕೊಟ್ಟಿತು, ಆಹಾರ ನೀಡಿ ಪೋಷಿಸಿತು. ಕಾಗೆಯ ಮರಿಗಳು ತಮ್ಮನ್ನೂ ಸ್ವಂತದವರಂತೆ ಕಂಡು ರಕ್ಷಿಸಲು ಮುಂದಾದವು.

ಆದರೆ ಕೃತಜ್ಞತೆ ಇಲ್ಲದ ಕೋಗಿಲೆ ಕಾಗೆಯ ಮರಿಗಳನ್ನೇ ದೂರ ತಳ್ಳಿ ಹಾಕಿತ್ತು. ಕೋಗಿಲೆ ಮರಿಗಳು ಕೋಗಿಲೆಯ ವಿರುದ್ಧ ತಿರುಗಿ ಬಿದ್ದವು. ಕೋಗಿಲೆಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಕೋಗಿಲೆ ಮರಿಗಳು ಹಾರಲು ಕಲಿತ ತಕ್ಷಣ ಕಾಗೆಯ ಗೂಡಿಗೆ ತೆರಳಿ ಎಲ್ಲಾ ವಿಚಾರ ತಿಳಿಸಿತು. ಕಾಗೆ “ನನಗೆ ನೀವು ಕೋಗಿಲೆಯ ಮರಿಗಳು ಎಂದು ಗೊತ್ತಾಗಿತ್ತು. ಆದರೆ ಹಾಗೆಂದು ಆಹಾರ ನೀಡದೆ ಸಾಯಿಸಲು ಮನಸ್ಸು ಬರಲಿಲ್ಲ.’ ಎಂದಿತು. ಕೋಗಿಲೆ ಮರಿಗಳು ಕಾಗೆಯನ್ನು ಅಪ್ಪಿಕೊಂಡವು.

* ಉಮ್ಮೆ ಅಸ್ಮ ಕೆ.ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next