ಬೆಳಗಾವಿ: ನಕಲಿ ಇನ್‌ವೈಸ್ (ದಾಖಲೆ) ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕೇಂದ್ರ ಜಿಎಸ್ ಟಿ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಯನ್ನು ಬಂದಿಸಿದ್ದಾರೆ.
132 ಕೋಟಿ ರೂ ಗಳ ಈ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್ ಟಿ ಅಧಿಕಾರಿಗಳು ಫೆಡರಲ್ ಲಾಜಿಸ್ಟಿಕ್ಸ್ ಕಂಪನಿಯ ನಕೀಬ ನಜೀಬ ಮುಲ್ಲಾ ಎಂಬುವರನ್ನು ಬಂಧಿಸಿದ್ದಾರೆ.
ವೃತ್ತಿಯಲ್ಲಿ ತೆರಿಗೆ ಸಲಹೆಗಾರರಾದ ನಕೀಬ್ ನಜೀಬ್ ಮುಲ್ಲಾ ಅವರು ನಕಲಿ ಸ್ವಾಮ್ಯದ ಸಂಸ್ಥೆಯನ್ನು ಸಹ ರಚಿಸಿದ್ದಾರೆ. ಫೆಡರಲ್ ಲಾಜಿಸ್ಟಿಕ್ಸ್ ಕಂಪನಿಯ ಮೂಲಕ ಅವರು ಅನೇಕ ಸಂಸ್ಥೆಗಳ ತೆರಿಗೆ ಪಾವತಿ ವಿಷಯ ಮತ್ತು ಇತರ ಜಿಎಸ್ ಟಿ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸುತ್ತಿದ್ದರು ಎಂದು ಕೇಂದ್ರ ಜಿಎಸ್ ಟಿ ಪ್ರಿನ್ಸಿಪಲ್ ಕಮಿಷನರ್ ದಿನೇಶ ಪಂಗಾರಕರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮುಖ್ಯವಾಗಿ ನಕೀಬ್ ನಜೀಬ್ ಮುಲ್ಲಾ ಅವರು ಮಾಸಿಕ ಜಿಎಸ್‌ಟಿ ಹೊಣೆಗಾರಿಕೆಗಳನ್ನು ನಿರ್ವಹಿಸಲು ತಮ್ಮ ಗ್ರಾಹಕರಿಂದ ನಗದು ಪಾವತಿಗಳನ್ನು ಸಂಗ್ರಹಿಸಲು ಬಳಸುತ್ತಿದ್ದರಲ್ಲದೆ ಇದನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಿದ್ದರು. ವಿಚಾರಣೆಯ ವೇಳೆ ನಕೀಬ್ ಮುಲ್ಲಾ ಅವರು ಮಾಸಿಕ ಜಿಎಸ್‌ಟಿ ರಿಟರ್ನ್ಸ ಗಳ ನಕಲಿ ಪಾವತಿಗಳ ಮೂಲಕ ಹಣವನ್ನು ಸಂಗ್ರಹಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಆರೋಪಿ ನಕೀಬ್ ನಜೀಬ್ ಮುಲ್ಲಾ ಅವರನ್ನು ಸಿಜಿಎಸ್‌ಟಿ ಕಾಯ್ದೆ, 2017 ರ ಸೆಕ್ಷನ್ 69 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಕೇಂದ್ರ ಜಿ ಎಸ್ ಟಿ ಪ್ರಿನ್ಸಿಪಲ್ ಕಮಿಷನರ್ ದಿನೇಶ ಪಂಗಾರಕರ ತಿಳಿಸಿದ್ದಾರೆ.
ಇದನ್ನೂ ಓದಿ: Indabettu ಗ್ರಾ.ಪಂ.ನಲ್ಲಿ ಅವ್ಯಹಾರ ಪ್ರಕರಣ; ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ