Advertisement

ಬೆಳೆಗಳು ಸಂಗೀತವ ಕೇಳಿವೆ!

07:11 PM Aug 04, 2019 | mahesh |

ಮಕ್ಕಳಿಗೆ ಲಾಲಿ ಹಾಡು ಕೇಳಿಸಿ ಮಲಗಿಸುತ್ತೇವೆ. ಮನಸ್ಸು ಮುದುಡಿದ್ದಾಗ ಹಾಡು ಕೇಳಿ ಉಲ್ಲಸಿತಗೊಳಿಸಿಕೊಳ್ಳುತ್ತೇವೆ. ಏಕೆಂದರೆ ಸಂಗೀತ, ಜೀವಕ್ಕೆ ಚೈತನ್ಯ ತುಂಬುತ್ತದೆ ಎಂಬ ಮಾತಿದೆ. ತೇರದಾಳದ ರೈತ ಧರೆಪ್ಪ ಕಿತ್ತೂರ, ವಿನೂತನ ಸಂಗೀತ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಅವರು, ತಾವು ಬೆಳೆಯುವ ಬೆಳೆಗೆ ಸಂಗೀತವನ್ನು ಕೇಳಿಸುತ್ತಿದ್ದಾರೆ!

Advertisement

ಸಸ್ಯಗಳಿಗೂ ಜೀವವಿದೆ, ಅದು ಸಂವಹನ ನಡೆಸುತ್ತದೆ. ಸಂಗೀತ, ಮಂತ್ರಗಳ ಸದ್ದಿಗೆ ಗಿಡಮರಗಳು ಪ್ರತಿಕ್ರಿಯಿಸುತ್ತವೆ ಎಂದು ವಿಜ್ಞಾನಿ ಡಾ. ಜಗದೀಶಚಂದ್ರ ಬೋಸ್‌ ಬಹಳ ಹಿಂದೆಯೇ ಹೇಳಿದ್ದರು. ಸಂಗೀತ ಗಿಡಮರಗಳ ಬೆಳವಣಿಗೆ, ಫಲಗಳ ಇಳುವರಿ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಅನೇಕ ವಿಜ್ಞಾನಿಗಳು ಸಂಶೋಧನೆಯಿಂದ ತೋರಿಸಿಕೊಟ್ಟಿದ್ದಾರೆ. ಅದರಿಂದ ಪ್ರಭಾವಿತರಾದ ಧರೆಪ್ಪ ಕಿತ್ತೂರ, ತಾವು ಬೆಳೆದ ಬೆಳೆಗಳಿಗೆ ಸಂಗೀತ ಕೇಳಿಸುವ ಮೂಲಕ ಹೆಚ್ಚು ಇಳುವರಿ ಪಡೆಯುವ ಪ್ರಯೋಗದತ್ತ ಆಕರ್ಷಿತರಾದರು. ಈ ಪ್ರಯೋಗದಿಂದ ಪ್ರಯೋಜನವಾಗಿದೆ ಎನ್ನುತ್ತಾರೆ ಅವರು.
ಚೆಂಡು ಹೂ, ಹೂಕೋಸು, ಎಲೆಕೋಸು, ಪಾಲಕ್‌, ಮೆಂತ್ಯೆ, ಕೊತ್ತಂಬರಿ, ಮೆಣಸಿನಕಾಯಿ, ಸಬ್ಬಸಗಿ, ಶೇಂಗಾ, ಉಳ್ಳಾಗಡ್ಡಿ, ರಾಜಗೇರಿಪಲ್ಲೆ, ಸೌತೆಕಾಯಿ ಬೆಳೆಯುತ್ತಿದ್ದಾರೆ. ಅಲ್ಲದೆ ಎಂಟು ತಳಿಯ ಕಬ್ಬು ಬೆಳೆಯುತ್ತಿದ್ದಾರೆ. ಈ ಬೆಳೆಗಳ ಸುತ್ತಲೂ ಧ್ವನಿವರ್ಧಕಗಳನ್ನು ಅಳವಡಿಸಿ ಪ್ರತಿನಿತ್ಯ ಹೊಲದಲ್ಲಿ ಸಂಗೀತ ಕೇಳಿಸುತ್ತಾರೆ ಧರೆಪ್ಪ.

ದಾದಾರಿಂದ ಪ್ರೇರಣೆ
ಕಳೆದ 18 ವರ್ಷಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ ಹತ್ತಿರ ಇರುವ ಮೋಹಳ ಗ್ರಾಮದಲ್ಲಿ ದಾದಾ ಬೋಡಕೆ ಎಂಬುವವರು ತಮ್ಮ ಪಪ್ಪಾಯ ನರ್ಸರಿಯಲ್ಲಿ ಸಸಿಗಳಿಗೆ ಸಂಗೀತ ಕೇಳಿಸುತ್ತಿರುವುದನ್ನು ಪ್ರತ್ಯಕ್ಷವಾಗಿ ನೋಡಿದ್ದರು. ಆವಾಗಲೇ ತಾವೂ ಅದನ್ನು ತಮ್ಮ ಜಮೀನಿನಲ್ಲಿ ಅಳವಡಿಸಬೇಕೆಂದು ಮನಸ್ಸು ಮಾಡಿದರು. ಧರೆಪ್ಪ ತಮ್ಮ 10 ಎಕರೆ ಜಮೀನಿನಲ್ಲಿ ಎರಡು ಕಡೆ 12 ಇಂಚ್‌ನ ಧ್ವನಿವರ್ಧಕ ಅಳವಡಿಸಿದ್ದಾರೆ. ತಮ್ಮ ಮನೆಯಿಂದ 600 ಅಡಿ ಉದ್ದ ತಂತಿ ಬಳಸಿ ಧ್ವನಿ ಪೆಟ್ಟಿಗೆಯನ್ನು ಜೋಡಿಸಿದ್ದಾರೆ.
ಎರಡು ಧ್ವನಿವರ್ಧಕ ಪೆಟ್ಟಿಗೆಗಳ ಮಧ್ಯೆ ಸಮನಾದ ಅಂತರವನ್ನು ಕಾಯ್ದುಕೊಂಡು 10 ಅಡಿ ಎತ್ತರದ ಕಂಬದ ಮೇಲೆ ಮಳೆಗಾಳಿಯಿಂದ ರಕ್ಷಿಸಲು ತಗಡಿನ ಬಾಕ್ಸ್‌ಅನ್ನು ಅಳವಡಿಸಿದ್ದಾರೆ. ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ತಬಲಾ, ಶಹನಾಯಿ, ವಯಲಿನ್‌, ಕೊಳಲು, ಸಿತಾರ್‌, ಜಲತರಂಗ, ಶಾಸ್ತ್ರೀಯ ವಾದ್ಯ ಸಂಗೀತ ಸೇರಿದಂತೆ ವಿವಿಧ ಸಂಗೀತವನ್ನು ಬೆಳೆಗಳಿಗೆ ಕೇಳಿಸುತ್ತಿದ್ದಾರೆ. ರಾತ್ರಿಯ ವೇಳೆ ವಾತಾವರಣ ಪ್ರಶಾಂತವಾಗಿರುವುದರಿಂದ ಹಾಗೂ ರಾತ್ರಿ ಬೆಳೆಗಳು ಆ್ಯಕ್ಟಿವ್‌ ಆಗಿರುವುದರಿಂದ ರಾತ್ರಿ ಹೊತ್ತು ಸಂಗೀತ ಕೇಳಿಸುವುದು ಪ್ರಯೋಜನಕಾರಿ ಎನ್ನುತ್ತಾರೆ ಧರೆಪ್ಪ.

ಜಾನುವಾರುಗಳೂ ಸಂಗೀತ ಕೇಳುತ್ತವೆ
ಕೊಟ್ಟಿಗೆಯಲ್ಲಿಯೂ ಧ್ವನಿವರ್ಧಕಗಳನ್ನು ಅಳವಡಿಸಿರುವ ಧರೆಪ್ಪ. ಜಾನುವಾರುಗಳಿಗೂ ಸಂಗೀತವನ್ನು ಕೇಳಿಸುತ್ತಿದ್ದಾರೆ. ಇದರಿಂದ ಹಸು ಎಂದಿಗಿಂತ ಹೆಚ್ಚು ಹಾಲು ಕೊಡುತ್ತಿದೆ ಎನ್ನುವುದು ಅವರ ಅನುಭವದ ಮಾತು. ಈ ಪ್ರಯೋಗವನ್ನು ನೋಡಲು ಬಂದ ವಿದೇಶಿಯರು ಈ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತರೆ ರಾಜ್ಯಗಳಿಂದಲೂ ಈ ಪ್ರಯೋಗವನ್ನು ನೋಡಲು ರೈತರು ಬರುತ್ತಿರುತ್ತಾರೆ. ಯಾವತ್ತಿಗೂ ನಿಂತ ನೀರಾಗದೆ ಪ್ರಯೋಗದ ಮೂಲಕ ಹೊಸತನಕ್ಕೆ ತೆರೆದುಕೊಳ್ಳುವ, ಆ ಮೂಲಕ ಅನೇಕ ಸಾಧ್ಯತೆಗಳಿಗೆ ಮೈಯೊಡ್ಡುವ ಮನಸ್ಸಿನಿಂದಲೇ ಯಶ ಸಿಗುತ್ತದೆ ಎನ್ನುವುದಕ್ಕೆ ಧರೆಪ್ಪ ಅವರೇ ಸಾಕ್ಷಿ.

ಬೆಳೆಯನ್ನು ಸಂತೋಷವಾಗಿರಿಸುವುದರಿಂದ ರೋಗಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲ, ಶೇ.5ರಿಂದ ಶೇ.10ರಷ್ಟು ಇಳುವರಿಯೂ ಹೆಚ್ಚಾಗಿದೆ.
-ಧರೆಪ್ಪ

Advertisement

-ಕಿರಣ ಶ್ರೀಶೆ„ಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next