Advertisement
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಮಾನವ-ವನ್ಯಪ್ರಾಣಿಗಳ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
Related Articles
Advertisement
ರೈಲ್ವೆ ಕಂಬಿ ಬೇಲಿ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಉತ್ತರಿಸಿ, ಓಂಕಾರ್ ಅರಣ್ಯದಲ್ಲಿ ರೈಲು ಕಂಬಿಯ ಬೇಲಿ ದಾಟಿಕೊಂಡು ಆನೆಗಳು ಬರುತ್ತಿರುವುದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಬೋಳೆಗೌಡನ ಕಟ್ಟೆ ಸಮೀಪದಲ್ಲಿ 15 ಕಿ.ಮೀ. ರೈಲ್ವೆ ಕಂಬಿಯ ಬೇಲಿ, 18 ಕಿ.ಮೀ. ಆನೆ ತಡೆ ಕಂದಕವನ್ನು ಡಿಸೆಂಬರ್ ಒಳಗೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳೆ ಪರಿಹಾರ ಹೆಚ್ಚಿಸಿ: ಬೆಳೆ ಪರಿಹಾರವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 67 ಲಕ್ಷ ರೂ. ಪರಿಹಾರ ನೀಡಬೇಕು. ಇದರಲ್ಲಿ 30 ಲಕ್ಷ ರೂ. ಸರ್ಕಾರ ನೀಡಿದ್ದು, 23 ಲಕ್ಷ ರೂ. ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿದಿರು ಬೆಳೆ: ನಾಗರಹೊಳೆ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ 150 ಹುಲಿಗಳು, 1600 ಆನೆಗಳು, 25 ಸಾವಿರ ಜಿಂಕೆಗಳಿವೆ. ಎರಡೂ ಭಾಗಗಳಲ್ಲಿಯೂ ಬಿದಿರು ಚೆನ್ನಾಗಿ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮೇವಿಗೆ ತೊಂದರೆಯಾಗುವುದಿಲ್ಲ. ಆಗ ರೈತರ ಜಮೀನಿಗೆ ಕಾಡು ಪ್ರಾಣಿಗಳು ಬರುವುದು ಕಡಿಮೆಯಾಗಲಿದೆ ಎಂದರು.
ಕಾರ್ಖಾನೆ ಪುನಾರಂಭ: ಕೆ.ಆರ್.ನಗರ ತಾಲೂಕಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭದ ಸಂಬಂಧ ಟೆಂಡರ್ ದಾಖಲೆಗಳನ್ನು ಹೊಂದಿಸಲಾಗುತ್ತಿದೆ ಎಂದು ಕಾರ್ಖಾನೆಯ ಪ್ರಭಾರ ಎಂ.ಡಿ. ಉಮೇಶ್ ಹೇಳಿದರು.
ಸಾಲಮನ್ನಾ: ಜಿಲ್ಲೆಯ 39,615 ರೈತರ ಒಟ್ಟು 214 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ ಎಂದು ಲೀಡ್‌ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲಪತಿ ಸಭೆಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 56,704 ರೈತರಿಂದ ಒಟ್ಟು 385 ಕೋಟಿ ರೂ. ಸಾಲವಿದೆ. ಸರ್ಕಾರ 214 ಕೋಟಿ ರೂ.ಗಳನ್ನು ನೀಡಿದ್ದು, ಉಳಿಕೆ 169 ಕೋಟಿ ರೂ. ಬಾಕಿ ಇದೆ. ಹೊಸ ಸಾಲ ತಕ್ಷಣ ಕೊಡಬೇಕೆಂದು ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಜ್ಯೋತಿ, ಎಸ್.ಪಿ ರಿಶ್ಯಂತ್, ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ: ಜಿಲ್ಲಾ ಮಟ್ಟದ ಸಭೆಯಲ್ಲಿ ರೈತ ಬೊಕ್ಕಳ್ಳಿ ನಂಜುಂಡಸ್ವಾಮಿ ಮಾತನಾಡಿ, ಕೈಗಾರಿಕೆಗಳಿಗೆ ಬೆಳಗಿನ ಜಾವ, ರೈತರಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಾರೆ. ಇದರಿಂದ ರೈತರು ಪಂಪ್‌ಸೆಟ್ ಮನೆಯಲ್ಲಿ ಮಲಗಬೇಕಾದ ಸ್ಥಿತಿ ಬಂದಿದೆ. ಇದಕ್ಕಾಗಿಯೇ ರೈತರ ಮಗನಿಗೆ ಹೆಣ್ಣು ಕೊಡುವುದಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳು ರೈತರನ್ನು ಮದುವೆಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸೆಸ್ಕ್ನ ಅಧೀಕ್ಷಕ ಇಂಜಿನಿಯರ್ ಮುನಿಗೋಪಾಲ್, ಹಿಂದೆ ಎರಡು ಪಾಳಿ ಮಾಡಿ ರಾತ್ರಿ 3 ಗಂಟೆ ಮತ್ತು ಹಗಲು 4 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಮಾತ್ರ ಈಗ ಹಗಲು ವೇಳೆಯೇ ಬೆಳಗ್ಗೆ 4 ಗಂಟೆಯಿಂದ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎಂದರು. ಬೆಳಗ್ಗೆ 4 ಗಂಟೆಗೆ ವಿದ್ಯುತ್ ನೀಡಿದರೆ ಕಾಡಂಚಿನ ಜಮೀನಿಗೆ ರೈತರು ಹೋಗಿ ಸಾಯಬೇಕೆ?, ಕಾಡು ಪ್ರಾಣಿಗಳ ಹಾವಳಿ ಇರುತ್ತದೆ. ಹಾಗಾಗೀ ಈ ಸಮಯವನ್ನು ಸ್ವಲ್ಪ ಬದಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.