Advertisement

ಸಾಲ ಕಟ್ಟದವರಿಗಷ್ಟೇ ಬೆಳೆ ಸಾಲ ಮನ್ನಾ

06:00 AM Jul 06, 2018 | Team Udayavani |

ಬೆಂಗಳೂರು: ರೈತರ ಸಾಲ ಮನ್ನಾ ಹೆಸರಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿರುವ ಸಾಲ ಮನ್ನಾ ಕೇವಲ 10 ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾಗಿರುವವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತದೆ. ಸಹಕಾರ ಬ್ಯಾಂಕ್‌ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ.ವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ ಕುರಿತು ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 2009ರ ಏ.1ರ ನಂತರ ತೆಗೆದುಕೊಂಡ ಮತ್ತು 2017ರ ಡಿ.31 ರಂದು ಬಾಕಿಯಿರುವ ಅವಧಿ ಮೀರಿದ ಬೆಳೆ ಸಾಲಗಳು, ಮರು ವರ್ಗೀಕರಣ ಮಾಡಲಾದ ಬೆಳೆ ಸಾಲಗಳು ಮತ್ತು ಎನ್‌ಪಿಎ ಬೆಳೆ ಸಾಲಗಳಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಂದರೆ, 2017ರ ಡಿಸೆಂಬರ್‌ 31ರ ದಿನಕ್ಕೆ ಸುಸ್ತಿದಾರರಿಗೆ ಮಾತ್ರ ಇದು ಅನ್ವಯವಾಗುತ್ತದೆ.

Advertisement

ಇದರ ಮಧ್ಯೆಯೂ ಮೆಚ್ಚತಕ್ಕ ಸಂಗತಿ ಎಂದರೆ, 2017ರ ಜೂನ್‌-ಜುಲೈ ತಿಂಗಳಲ್ಲಿ ಬೆಳೆಸಾಲವನ್ನು ನವೀಕರಣ ಮಾಡಿ ಈಗ ಅದನ್ನು ಕಟ್ಟಿದವರನ್ನು ಪ್ರಾಮಾಣಿಕ ಮರುಪಾವತಿದಾರರು ಎಂದು ಪರಿಗಣಿಸಿ ಅವರಿಗೆ 25 ಸಾವಿರ ರೂ. ‘ಉಡುಗೊರೆ’ ನೀಡಲಾಗುತ್ತದೆ. ರಾಜ್ಯ ಸರ್ಕಾರ ನೀಡುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮನ್ನಾ ಮಾಡಬೇಕಿರುವ ಎನ್‌.ಪಿ.ಎ. ಬೆಳೆ ಸಾಲ, ಮರು ವರ್ಗೀಕರಿಸಿದ ಬೆಳೆ ಸಾಲ, ಸುಸ್ತಿ ಬೆಳೆ ಸಾಲದ ಮೊತ್ತ 30,266 ಕೋಟಿ ರೂ. ಇದೆ. ಆದರೆ, ಸಹಕಾರ ಬ್ಯಾಂಕ್‌ಗಳಲ್ಲಿ ಸುಸ್ತಿಯಾಗಿರುವ ಸಾಲದ ಮೊತ್ತ 400ರಿಂದ 500 ಕೋಟಿ ರೂ. ಒಳಗಿದೆ. ಅಷ್ಟೇ ಅಲ್ಲ, ಇಲ್ಲಿ ಸಾಲ ಮರುವರ್ಗೀಕರಿಸುವ ವ್ಯವಸ್ಥೆಯೂ ಇಲ್ಲ ಎಂದು ಸಹಕಾರ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. ಇನ್ನೊಂದೆಡೆ ವಾಣಿಜ್ಯ ಬ್ಯಾಂಕ್‌ಗಳು ಸುಸ್ತಿದಾರರನ್ನು ಸುಮ್ಮನೆ ಬಿಡುವುದಿಲ್ಲ. ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡದೇ ಇದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಇಲ್ಲವೇ ಹರಾಜು ಹಾಕುವ ಕೆಲಸ ಮಾಡುತ್ತದೆ.

ಕೆಲ ಜಿಲ್ಲೆಗಳಿಗೆ ಅನುಕೂಲ: ಇದರ ಮಧ್ಯೆಯೂ ರಾಜ್ಯದ ಕೆಲವು ಜಿಲ್ಲೆಗಳಿಗೆ, ಅದರಲ್ಲೂ ಹಳೇ ಮೈಸೂರು ಭಾಗದ ಮೂರ್ನಾಲ್ಕು ಜಿಲ್ಲೆಗಳ ರೈತರಿಗೆ ಸುಸ್ತಿ ಸಾಲ ಮನ್ನಾ ಯೋಜನೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಈ ಜಿಲ್ಲೆಗಳಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಿ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಅವರನ್ನು ಸುಸ್ತಿದಾರರು ಎಂದು ಪರಿಗಣಿಸಿ ಆ ಸಾಲವನ್ನು ಅಡಮಾನ ಸಾಲವಾಗಿ ಪರಿವರ್ತಿಸಿ ಅವರಿಗೆ ಹೊಸದಾಗಿ ಬೆಳೆ ಸಾಲ ನೀಡಲಾಗಿದೆ. ಸುಸ್ತಿ ಸಾಲ ಮನ್ನಾ ಯೋಜನೆಯಿಂದ ಈ ಅಡಮಾನ ಸಾಲ ಮನ್ನಾ ಆಗುತ್ತದೆ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ರೀತಿಯ ಸಾಲ ಪರಿವರ್ತನೆ ಸೌಲಭ್ಯ ಇಲ್ಲ. ಇನ್ನು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ರೈತರು ತಮ್ಮ ಸಾಲದ ಅವಧಿ ಮುಗಿಯುತ್ತಿದ್ದಂತೆ ಅದನ್ನು ನವೀಕರಣ ಮಾಡಿ ಮರುಪಾವತಿ ಮುಂದುವರಿಸುತ್ತಾರೆ.  ಅಂಥವರನ್ನು ಪ್ರಾಮಾಣಿಕ ಮರುಪಾವತಿದಾರರು ಎಂದು ಪರಿಗಣಿಸಿ 25 ಸಾವಿರ ರೂ. ಮೊತ್ತವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ 50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಮಾಡಿದರೆ, ಕುಮಾರಸ್ವಾಮಿ ಸರ್ಕಾರ ಪ್ರಾಮಾಣಿಕ ಸಾಲ ಮರುಪಾವತಿ ಮಾಡುವ ರೈತರಿಗೆ 25 ಸಾವಿರ ರೂ. ಉಡುಗೊರೆ ನೀಡಿದಂತಾಗಿದೆ.

ಅಂದಾಜು ಫ‌ಲಾನುಭವಿಗಳು 
ಸಾರ್ವಜನಿಕ ವಲಯ ಬ್ಯಾಂಕ್‌ಗಳು, ಖಾಸಗಿ ವಲಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ವಲಯಗಳೊಂದಿಗೆ ಬೆಳೆ ಸಾಲಗಳನ್ನು ಹೊಂದಿರುವ ರೈತರ ಒಟ್ಟು ಸಾಲವು 55,328 ರೂ. ಕೋಟಿ ಎಂದು ಅಂದಾಜಿಸಲಾಗಿದೆ. ಸಾಲ ಮನ್ನಾ ಯೋಜನೆಯಡಿಯಲ್ಲಿ ರೈತರ ಸುಸ್ತಿಯಿರುವ ಒಟ್ಟು ಸಾಲಗಳ ಸಂಖ್ಯೆ 17.32 ಲಕ್ಷ ಎಂದು ಅಂದಾಜಿಸಲಾಗಿದ್ದು, ಇದರ ಮೊತ್ತವು 30,266 ಕೋಟಿ ರೂ.ಗಳಾಗಿರುತ್ತವೆ. ಚಾಲ್ತಿ ಸಾಲಗಳನ್ನು ಹೊಂದಿದ 27,67 ಲಕ್ಷ ಸಾಲಗಾರರು ಮತ್ತು ತಮ್ಮ ಹಿಂದಿನ ಬೆಳೆ ಸಾಲವನ್ನು ಮರುಪಾವತಿ ಮಾಡಿದ ರೈತರಿಗೆ 6,893 ಕೋಟಿ ರೂ. ವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಈ ಮೂಲಕ ರೈತರ 44.89 ಲಕ್ಷ ಸಾಲ ಖಾತೆಗಳಿಗೆ, ಸಂಚಿತವಾಗಿ 37,159 ಕೋಟಿಗಳಷ್ಟು ಪ್ರಯೋಜನವಾಗುವ ಅಂದಾಜಿದೆ. ಒಟ್ಟಾರೆ ಈ ದೊಡ್ಡ ಪ್ರಮಾಣದ ಸಾಲ ಮನ್ನಾ ಮೊತ್ತವನ್ನು ರಾಜ್ಯ ಸರ್ಕಾರ 4 ವರ್ಷಗಳ ಅವಧಿಯಲ್ಲಿ ವಾರ್ಷಿಕ, ಅರೆ ವಾರ್ಷಿಕ ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಮರು ಪಾವತಿಸಲಿದೆ.

ಯಾವ ಸಾಲ ಮನ್ನಾ?
ರೈತರ ಪ್ರತಿ ಕುಟುಂಬಕ್ಕೆ ಗರಿಷ್ಠ 2 ಲಕ್ಷ ರೂ.ವರೆಗೆ ಸುಸ್ತಿ ಸಾಲಗಳಿಗೆ ವಿನಾಯಿತಿ ಒದಗಿಸುತ್ತದೆ(ರೈತ, ಆತನ ಪತ್ನಿ ಮತ್ತು ಅವಲಂಬಿತ ಮಕ್ಕಳು). 2009ರ ಏ.1ರ ನಂತರ ತೆಗೆದುಕೊಂಡ ಮತ್ತು 2017ರ ಡಿ.31 ರಂದು ಬಾಕಿಯಿರುವ  ಅವಧಿ ಮೀರಿದ ಬೆಳೆ ಸಾಲಗಳು, ಮರು ವರ್ಗೀಕರಣ
ಮಾಡಲಾದ ಬೆಳೆ ಸಾಲಗಳು ಮತ್ತು ಎನ್‌ಪಿಎ ಬೆಳೆ ಸಾಲಗಳಿಗೆ ಯೋಜನೆ ಅನ್ವಯವಾಗುತ್ತದೆ.

Advertisement

ಯಾವುದು ಬೆಳೆಸಾಲ?
ಬೆಳೆಗಳನ್ನು ಬೆಳೆಯಲು ನೀಡಿದ ಬೆಳೆಸಾಲ ಅಥವಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ಮತ್ತು ಗರಿಷ್ಠ 12 ರಿಂದ 18 ತಿಂಗಳಲ್ಲಿ ಮರುಪಾವತಿಸುವ ಸಾಲವನ್ನು ಬೆಳೆಸಾಲ ಎಂದು ಅರ್ಥೈಸಲಾಗುವುದು. ಇದು ಪ್ಲಾಂಟೇಶನ್‌ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀಡಿದ ಬೆಳೆ ಸಾಲವನ್ನು
ಒಳಗೊಂಡಿರುತ್ತದೆ.

ಒಳಪಡದ ವರ್ಗಗಳು
– ವೈಯಕ್ತಿಕ ರೈತ, ಹಿಂದೂ ಅವಿಭಾಜ್ಯ ಕುಟುಂಬಗಳನ್ನು ಹೊರತುಪಡಿಸಿ ಎಲ್ಲ ಕಾನೂನು ಬದ್ಧ ಸಂಸ್ಥೆಗಳು.
ರೈತರಿಗೆ ನೀಡಲಾದ ಒಡವೆ ಅಥವಾ ಆಭರಣ ಸಾಲಗಳು.

– ಟ್ರಸ್ಟ್‌ಗಳು, ಪಾಲುದಾರಿಕೆಗಳು, ಮೈಕ್ರೋ ಫೈನಾನ್ಸ್‌ ಇನ್ಸ್ಟಿಟ್ಯೂಷನ್‌, ನಗರ ಸಹಕಾರ ಬ್ಯಾಂಕ್‌ಗಳಿಂದ ನೀಡಲಾದ ಸಾಲಗಳು.

– 4 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲಗಳು.

– ವಾಹನಗಳ ಖರೀದಿಗಾಗಿ ಮತ್ತಿತರ ಆದ್ಯತೆಯಲ್ಲದ ಸಾಲಗಳು.

– ಕೃಷಿ ಉತ್ಪನ್ನಗಳನ್ನು ಅಡವಿಟ್ಟುಕೊಂಡು ನೀಡಿರುವ ಸಾಲಗಳು.

– ಕೇಂದ್ರ, ರಾಜ್ಯ ಸರ್ಕಾರದ ನೌಕರರು ಅಥವಾ ಸರ್ಕಾರಗಳ ಅಂಗಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು,

ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕ್‌, ಶೈಕ್ಷಣಿಕ ಸಂಸ್ಥೆಗಳ ಉದ್ಯೋಗಿಗಳಿಗೆ ನೀಡಿದ ಸಾಲಗಳು.

– ಸಂಚಿತ ನಿಧಿಯಿಂದ ಮಾಸಿಕ 15 ಸಾವಿರ ರೂ. ಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವ ನಿವೃತ್ತಿ ವೇತನದಾರರಿಗೆ(ಮಾಜಿ ಸೈನಿಕರ ಹೊರತುಪಡಿಸಿ) ನೀಡಿರುವ ಬೆಳೆ ಸಾಲಗಳು.

–  ಸ್ವ ಸಹಾಯ ಗುಂಪುಗಳು(ಎಸ್‌.ಎಚ್‌.ಜಿ.) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳಲ್ಲಿ ಪಡೆದ ಸಾಲಗಳು.
 ಕಾಂಟ್ರಾಕ್ಟ್ ಫಾರ್ಮಿಂಗ್‌ಗಾಗಿ ಪಡೆದ ಸಾಲಗಳು.

– ರೈತರಿಗೆ ಸಾಲ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾದ ಸಾಲಗಳು.

– ಮೀನುಗಾರಿಕೆ, ಹೈನುಗಾರಿಕೆ ಮತ್ತು ಕೃಷಿ ಸಂಬಂಧಿತ ಇತರೆ ಸಾಲಗಳು.
 
– ಸಾಲದ ಮೊತ್ತವನ್ನು ದುರ್ಬಳಕೆ ಮಾಡಿದ ಅಥವಾ ನಿಕ್ಷೇಪಗಳಲ್ಲಿ ಠೇವಣಿ ಮಾಡಲಾಗಿರುವ ಸಾಲಗಳು.

– ವಂಚನೆ, ದುರ್ಬಳಕೆ ಒಳಗೊಂಡಿರುವ ಸಾಲಗಳು.

ಬಜೆಟ್‌ ನಲ್ಲಿ ರಾಜ್ಯದ ರೈತರ 34 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಭಿನಂದನೆಗಳು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಮುಂದುವರೆಸಿರುವುದು ರಾಜ್ಯದ ಜನತೆಗೆ ಅನುಕೂಲವಾಗಿದೆ. ಕೃಷಿ, ಶಿಕ್ಷಣ, ಮೂಲಸೌಕರ್ಯ, ಪರಿಸರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ.
– ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next