Advertisement

ವಸ್ತು ನಿಷ್ಠವಾಗಿ ಬೆಳೆ ಹಾನಿ ಸಮೀಕ್ಷೆ: ಬೀಳಗಿ

02:50 PM May 27, 2022 | Team Udayavani |

ಹರಿಹರ: ಮಳೆಯಿಂದ ಹಾನಿಗೀಡಾದ ಬೆಳೆ ನಷ್ಟ ಕುರಿತು ರೈತರು, ಗ್ರಾಮಸ್ಥರ ಸಮ್ಮುಖದಲ್ಲೇ ವಸ್ತುನಿಷ್ಠವಾಗಿ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಸೂಚನೆ ಮೇರೆಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ನಡೆಸಿದ ಅವರು, ಪಕ್ಕಾ ಮನೆ ಪೂರ್ಣ ಹಾನಿಗೀಡಾಗಿದ್ದರೆ 5 ಲಕ್ಷ ರೂ., ಕಚ್ಚಾಮನೆ ಪೂರ್ಣ ಹಾನಿಯಾಗಿದ್ದರೆ 3 ಲಕ್ಷ ರೂ., ಭಾಗಶಃ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು.

ಅತಿವೃಷ್ಟಿಯಿಂದ ಹಾನಿಗೀಡಾದ ಕಮಲಾಪುರಕ್ಕೆ ಇದುವರೆಗೆ ತಹಶೀಲ್ದಾರರು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದರು. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರು ತಹಶೀಲ್ದಾರರಿಗೆ ಸೂಚಿಸಿದರು. ರಾಘವೇಂದ್ರ ಮಠ ಸಮೀಪದ ನಾಡಬಂದ್‌ ಶಾವಲಿ ದರ್ಗಾದ ಮುಂದಿನ ರಸ್ತೆಯ ಸಮಸ್ಯೆಯನ್ನು ಸ್ಥಳೀಯರೇ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕೆಂದರು.

ಸಭೆಯಲ್ಲಿ ಪೊಲೀಸ್‌ ಪೇದೆಯೊಬ್ಬರ ಪತ್ನಿ ಕೋರ್ಟ್‌ ಆದೇಶವಿದ್ದರೂ ಪತಿ ನಾಲ್ಕು ವರ್ಷಗಳಿಂದ ಜೀವನಾಂಶ ನೀಡಿಲ್ಲ ಎಂದಾಗ, ಎಸ್‌ಪಿ ಜೊತೆ ಮಾತನಾಡಿ ಇತ್ಯರ್ಥಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ರೈತರೊಬ್ಬರು ದನದ ಕೊಟ್ಟಿಗೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೆಸ್ಕಾಂ ಸಿಬ್ಬಂದಿ ಗ್ರಾಪಂ ನಿರಾಕ್ಷೇಪಣ ಪತ್ರ ಕೇಳುತ್ತಿದ್ದಾರೆ ಎಂದು ಹೇಳಿದಾಗ, ಬೆಸ್ಕಾಂ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.

ನಗರಸಭಾ ಸದಸ್ಯ ದಾದಾ ಖಲಂದರ್‌, ಕಾಳಿದಾಸ ನಗರ, ಬೆಂಕಿನಗರಕ್ಕೆ ಡಿ.ಬಿ. ಕೆರೆ ಕಾಲುವೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಲು ವಿಶೇಷ ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಒಟ್ಟು 14 ಅರ್ಜಿಗಳು ಸಲ್ಲಿಕೆಯಾಗಿದ್ದು, ಐದು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದವುಗಳನ್ನು ಸ್ಥಳ ಭೇಟಿ ನಂತರ ಇತ್ಯರ್ಥಪಡಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಸಭೆಗೂ ಮುನ್ನ ಆರ್‌ಆರ್‌ಟಿ ಸೆಕ್ಷನ್‌ಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಬೀಳಗಿ, ರೈತರನ್ನು ಅನವಶ್ಯಕವಾಗಿ ಅಲೆದಾಡಿಸಬಾರದು. ನಿಗದಿತ ಸಮಯದೊಳಗೆ ಅರ್ಜಿ ವಿಲೇ ಮಾಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು. ಮೋಜಿಣಿ ವಿಭಾಗದಲ್ಲಿ ವಿಳಂಬವಾಗಿದ್ದ ಅರ್ಜಿಯೊಂದನ್ನು ಜೂನ್‌ ತಿಂಗಳೊಳಗೆ ವಿಲೇ ಮಾಡಬೇಕೆಂದು ತಾಕೀತು ಮಾಡಿದರು. ರೈತ ಸಂಘದ ಕಾರ್ಯದರ್ಶಿ, ವಕೀಲ ಎಸ್‌. ಮಂಜುನಾಥ್‌, ಉಪಾಧ್ಯಕ್ಷ ಹಳ್ಳಿಹಾಳು ಹನುಮಂತಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಸಿಪಿಐ (ಎಂಎಲ್‌)ನ ಎಸ್‌. ಬೀರಪ್ಪ, ಉಪವಿಭಾಗಾಧಿಕಾರಿ ಎನ್‌. ದುರ್ಗಾಶ್ರೀ, ತಹಶೀಲ್ದಾರ್‌ ಡಾ| ಎಂ.ಬಿ. ಅಶ್ವತ್ಥ, ಸಹಾಯಕ ಕೃಷಿ ನಿರ್ದೇಶಕ ನಾರನಗೌಡ, ಬಿಇಒ ಬಿ.ಸಿ. ಸಿದ್ದಪ್ಪ, ನಗರಸಭೆ ಪೌರಾಯುಕ್ತ ಬಸವರಾಜಪ್ಪ, ಎಇಇ ಎಸ್‌. ಎಸ್‌. ಬಿರಾದಾರ್‌ ಇದ್ದರು.

ಕೆರೆ ಒತ್ತುವರಿ ತೆರವಿಗೆ ಮನವಿ

ಬಗರ್‌ಹುಕುಂ ಜಮೀನಿನ ಅರ್ಜಿಗಳನ್ನು ಕೂಡಲೇ ಪರಿಶೀಲಿಸಬೇಕು. ಜಲಾವೃತವಾಗುವ ಡಿ.ಬಿ. ಕೆರೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಅಥವಾ ಬೇರೆಡೆ ಜಮೀನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿನ 600 ಸಣ್ಣ, ದೊಡ್ಡ ಕೆರೆಗಳ ಜಾಗ ಒತ್ತುವರಿಯಾಗಿದ್ದು ತೆರವುಗೊಳಿಸಬೇಕೆಂದು ಒತ್ತಾಯಿಸಿ ರೈತ ಮುಖಂಡ ಬಲ್ಲೂರು ರವಿಕುಮಾರ್‌ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next