ಬೀದರ: ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಮೊದಲನೇ ಕಂತಿನಲ್ಲಿ ಕೂಡಲೇ ಎಕರೆಗೆ 25 ಸಾವಿರ ರೂ. ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಭಾರಿ ಮಳೆಯಿಂದ ಬೆಳೆ ಹಾನಿ ಸಂಭವಿಸಿದ ಬೀದರ ದಕ್ಷಿಣ ಕ್ಷೇತ್ರದ ಕೋಳಾರ (ಬಿ) ಮತ್ತು ಆಣದೂರ ಜಮೀನುಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನಿರಂತರ ಮಳೆಯಿಂದ ಕ್ಷೇತ್ರದ ಬಹುತೇಕ ರೈತರು ಬೆಳೆ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕ್ಷೇತ್ರದಲ್ಲಿ ಸುಮಾರು 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಬಹುತೇಕ ಬೆಳೆ ಸಂಪೂರ್ಣವಾಗಿ ಹಾನಿಗಿಡಾಗಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದಲ್ಲಿ ಸಂಭವಿಸಿದ ಬೆಳೆ ಹಾನಿಯ ಸಮೀಕ್ಷೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ವರದಿಯನ್ನು ಎರಡ್ಮೂರು ದಿನಗಳಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ವರದಿಯನ್ನು ತಕ್ಷಣವೇ ಸಿಎಂ ಗಮನಕ್ಕೆ ತಂದು ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ಹಾನಿಯ ಬಗ್ಗೆ ಮಾಹಿತಿ ನೀಡಿ ಪರಿಹಾರ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ 15 ದಿನಗಳಲ್ಲಿ ಪರಿಹಾರ ನೀಡುತ್ತಾರೆ. ರೈತರಿಗೆ ಸಮಸ್ಯೆಯಾದರೆ ಏಕೆ 15 ದಿನಗಳಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಸರ್ಕಾರ ರೈತರ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಏಕೆ? ಈ ಬಗ್ಗೆ ಅಧಿವೇಶನದಲ್ಲಿ ಕೂಡ ಪ್ರಶ್ನೆ ಮಾಡಿದ್ದೇನೆ. ರೈತರ ಪರವಾಗಿ ನಾವು ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಪರವಾಗಿ ಕೆಲಸ ಮಾಡುತ್ತೇವೆ. ರೈತ ಸಾಲಗಾರ ಆಗಬಾರದು. ಆ ರೀತಿಯ ಯೋಜನೆಗಳನ್ನು ನಾವು ಜಾರಿಗೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ದೂಳಪ್ಪ ಹೊಸಳ್ಳಿ, ಕಮಠಾಣಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀಲ, ಕಂದಾಯ ನಿರೀಕ್ಷಕ ಜೈಭೀಮ್, ಗ್ರಾಮ ಲೆಕ್ಕಾಧಿಕಾರಿ ರೇಣುಕಾ, ಗ್ರಾಪಂ ಸದಸ್ಯರಾದ ಖಾಶಿನಾಥ ಮೇತ್ರೆ, ಶ್ರೀಮಂತ ಸಂಗಪ್ಪ, ಗೌತಮ ಸೇರಿದಂತೆ ರೈತ ಮುಖಂಡರು ಇದ್ದರು.