Advertisement

ಬೆಳೆ ಪರಿಹಾರ: ರೈತರಿಗೆ ಅನ್ಯಾಯವಾಗದಂತೆ ಕ್ರಮ

11:00 AM Oct 10, 2021 | Team Udayavani |

ಬೀದರ: ಅತಿವೃಷ್ಟಿಯಿಂದ ಬೆಳೆ ಹಾನಿ ಮತ್ತು ಮನೆ ಕುಸಿತದಿಂದ ತೊಂದರೆಗೊಳಗಾದ ಫಲಾನುಭವಿಗಳಿಗೆ ಸಮರ್ಪಕವಾಗಿ ಪರಿಹಾರ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ವಿಮಾ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ನವೀಕರಿಸಬಹುದಾದ ಇಂಧನಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವರಾದ ಭಗವಂತ ಖೂಬಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೀದರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿ ಕುರಿತು ವಿವರಣೆ ಪಡೆದು ಮಾತನಾಡಿದ ಅವರು, ಬೆಳೆ ಹಾನಿಗೆ ಒಳಗಾಗಿರುವ ಯಾವುದೇ ರೈತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಈ ವೇಳೆ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.71ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹೆಚ್ಚಿನ ಮಳೆಯಿಂದ ಈವರೆಗೆ 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಅದರಲ್ಲಿ ಸೋಯಾ 95,546 ಹೆಕ್ಟೇರ್‌ ಮತ್ತು ತೊಗರಿ 52,899 ಹೆಕ್ಟೇರ್‌ ಸೇರಿದೆ. ಪ್ರಾಥಮಿಕ ವರದಿ ಈಗಾಗಲೇ ಸಲ್ಲಿಸಲಾಗಿದ್ದು, ಜಂಟಿ ಸಮೀಕ್ಷೆ ವರದಿಯನ್ನು ಬುಧವಾರದವರೆಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:‘ಬೀದರ ಬಂದ್‌’ಗೆ ದಲಿತ ಸಂಘಟನೆಗಳ ಬೆಂಬಲ

ಜಲಜೀವನ ಮಿಷನ್‌ ಯೋಜನೆಯಡಿ ಜಿಲ್ಲೆಯಲ್ಲಿ 135 ಕಾಮಗಾರಿಗಳಲ್ಲಿ ಅಂತರ್ಜಲ ಮಟ್ಟ ಇಲ್ಲದಿರುವ ಕಾರಣ 4 ಕೆಲಸಗಳನ್ನು ಕೈಬಿಡಲಾಗಿದೆ. ಒಟ್ಟು 122 ಕಾಮಗಾರಿಗಳು ಮನಡೆಯುತ್ತಿದ್ದು, ಅದರಲ್ಲಿ 16 ಪೂರ್ಣಗೊಂಡಿದ್ದರೆ, ಇನ್ನೂ 106 ಪ್ರಗತಿಯಲ್ಲಿವೆ ಎಂದು ಯೋಜನೆ ಇಇ ಶಿವಾಜಿ ಸಭೆಗೆ ತಿಳಿಸಿದರು. ಯೋಜನೆಯ ಅನುಷ್ಠಾನ ಸರಿಯಾಗಿ ನಡೆಯಬೇಕು ಎಂದು ಸಚಿವ ಖೂಬಾ ಸೂಚಿಸಿದ್ದರಲ್ಲದೇ ಬೀದರ ನಗರದಲ್ಲಿ ಯುಜಿಡಿ ಕಾಮಗಾರಿಗಳು ಗುಣಮಟ್ಟದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

Advertisement

ಬೀದರ-ಕಮಲನಗರ ಹೆದ್ದಾರಿ ಕಾಮಗಾರಿಯನ್ನು ಬರುವ ಡಿಸೆಂಬರ್‌ ಕೊನೆಯ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಇದೆ ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಗಡುವು ವಿಧಿಸಿದರು. ಬೀದರ-ಹುಮನಾಬಾದ್‌ ಹಾಗೂ ಬೀದರ-ಔರಾದ್‌ ಹೆದ್ದಾರಿ ಕಾಮಗಾರಿಗಳನ್ನು ಕೂಡ ತ್ವರಿತಗತಿಯಲ್ಲಿ ನಡೆಸಲು ತಿಳಿಸಿದರು.

ಬೀದರ ಜಿಲ್ಲೆಯಲ್ಲಿ ವಿಪರೀತ ಮಳೆ ಬಿದ್ದಿದ್ದರೂ ಎಲ್ಲೂ ಕೆರೆಗಳು ಒಡೆದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 82 ಕೆರೆಗಳು ಭರ್ತಿಯಾಗಿವೆ. 17 ಕೆರೆಗಳು ಶೇ. 50ರಷ್ಟು ಭರ್ತಿಯಾಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಮೇಧಾ ಅವರು ಸಭೆಗೆ ಮಾಹಿತಿ ನೀಡಿದರು.

ಬೀದರ ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ 81.5 ಕಿ.ಮೀ ರಸ್ತೆ ಹಾಳಾಗಿದ್ದು, ಇದರ ದುರಸ್ತಿಗೆ 137 ಲಕ್ಷ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. 89 ಅಂಗನವಾಡಿ ಕಟ್ಟಡಗಳು ಹಾಳಾಗಿದ್ದು, ಇವುಗಳ ದುರಸ್ತಿಗೆ 168 ಲಕ್ಷ ರೂ.ಗಳು,  ಅದೇ ರೀತಿ 261 ಶಾಲಾ ಕೊಠಡಿಗಳು ಕೂಡ ಹಾಳಾಗಿದ್ದು, ಇವುಗಳ ದುರಸ್ತಿಗೆ 217 ಲಕ್ಷ ರೂ. ಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಪಂಚಾಯತ್‌ ರಾಜ್ಯ ಇಂಜಿನಿಯರಿಂಗ್‌ ಇಲಾಖೆ ಅಭಿಯಂತರರು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌., ಜಿಪಂ ಸಿಇಒ ಜಹೀರಾ ನಸೀಮ್‌, ಎಸ್ಪಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ಬಿ. ಬಾಬುರೆಡ್ಡಿ, ಸಹಾಯಕ ಆಯುಕ್ತರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next