ಶಿವಮೊಗ್ಗ: ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ. ಗಾಳದಲ್ಲಿ ಮೊಸಳೆ ಮರಿಯನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಇವರು ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದರು.
ಗಾಳ ಎಳೆದಾಗ ಬಂತು ಮೊಸಳೆ: ರಶೀದ್ ಅವರು ಮೀನಿಗಾಗಿ ತುಂಗಾ ನದಿಯಲ್ಲಿ ಹಾಕಿದ್ದ ಗಾಳ ಜಗ್ಗಿದಂತಾಗಿದೆ. ಕೂಡಲೇ ಅವರು ಗಾಳವನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಗಾಳದಲ್ಲಿ ಮೀನಿನ ಬದಲು ಮೊಸಳೆ ಮರಿ ಸಿಕ್ಕಿಬಿದ್ದಿತ್ತು. ಇದನ್ನು ಕಂಡು ಅವರು ಭಯಗೊಂಡಿದ್ದಾರೆ. ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ.
Related Articles
ಇತ್ತೀಚೆಗೆ ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಈಗ ಕೂಡಲಿ ಸಮೀಪದ ಪಿಳ್ಳಂಗಿರಿ ಬಳಿ ಮೊಸಳೆ ಮರಿ ಸಿಕ್ಕಿದ್ದು, ಸಂತಾನೋತ್ಪತ್ತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತುಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
Crocodiles
ಜನರು ತುಂಗಾ ನದಿ ಬಳಿಗೆ ಹೋಗಿ ಬರುತ್ತಾರೆ. ದನಕರುಗಳು ಕೂಡ ನೀರು ಕುಡಿಯಲು ಹೊಳೆ ಬಳಿಗೆ ಬರುತ್ತವೆ. ಮೊಸಳೆಗಳು ಇರುವುದು ಗೊತ್ತಾಗುತ್ತಿದ್ದಂತೆ ಜನರು ಎಚ್ಚೆತ್ತುಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.