ರವಿ ಕೆರೆಯ ದಡದಲ್ಲಿ ನಡೆದುಹೋಗುತ್ತಿದ್ದ. ಯಾರೋ “ಕಾಪಾಡಿ’ಎಂದು ಕೂಗುತ್ತಿದ್ದದ್ದು ಕೇಳಿಸಿತು. ಯಾರೆಂದು ನೋಡಿದರೆ ಮೊಸಳೆಯೊಂದು ಮೀನುಗಾರರು ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡಿತ್ತು. ರವಿಯನ್ನು ನೋಡಿ ಮೊಸಳೆ ತನ್ನನ್ನು ಕಾಪಾಡಿ ಪುಣ್ಯ ಕಟ್ಟಿಕೊಳ್ಳುವಂತೆ ವಿನಂತಿಸಿಕೊಂಡಿತು. ಆದರೆ ರವಿ “ಬಲೆಯಿಂದ ಬಿಡಿಸಿದ ಕೂಡಲೆ ನನ್ನನ್ನೇ ತಿಂದು ಮುಗಿಸುತ್ತೀಯ’ ಎಂದು ಸಹಾಯ ಮಾಡಲು ನಿರಾಕರಿಸಿದ. ಮೊಸಳೆ “ಖಂಡಿತವಾಗಿಯೂ ಇಲ್ಲ. ಯಾವ ಅಪಾಯವನ್ನೂ ಮಾಡುವುದಿಲ್ಲವೆಂದು ನಾನು ನಿನಗೆ ಮಾತು ಕೊಡುತ್ತೇನೆ’ ಎಂದಿತು. ಮೊಸಳೆಯ ಮಾತನ್ನು ನಂಬಿ ರವಿ ಬಲೆಯನ್ನು ಬಿಡಿಸಿದ.
ಅರ್ಧ ಬಲೆ ಬಿಡಿಸುತ್ತಿದ್ದಂತೆಯೇ ಮೊಸಳೆ ರವಿಯ ಕಾಲನ್ನು ಕಚ್ಚಿ ಹಿಡಿಯಿತು. ರವಿ “ಏನಿದು ಅನ್ಯಾಯ. ನೀನು ಕೊಟ್ಟ ಮಾತಿಗೆ ಬೆಲೆಯೇ ಇಲ್ಲವೇ?’ ಎಂದನು ಅಳುತ್ತಾ. ಆಗ ಮೊಸಳೆ, “ಈ ಜಗತ್ತಿನಲ್ಲಿ ನ್ಯಾಯ ನೀತಿ ಯಾವುದು ಇಲ್ಲ. ಇದೇ ಜೀವನ!’ಎಂದಿತು. ರವಿ ಈ ಮಾತನ್ನು ನಂಬಲಿಲ್ಲ. ಆಗ ಮೊಸಳೆ ಮರದ ಮೇಲಿದ್ದ ಹಕ್ಕಿಯನ್ನು ಕೇಳಿತು. ಅದು ಮೊಸಳೆಯ ಮಾತಿಗೆ ಸಮ್ಮತಿ ಸೂಚಿಸಿತು. ಆದರೂ ರವಿ ನಂಬಲು ಸಿದ್ಧನಿರಲಿಲ್ಲ. ಅಷ್ಟರಲ್ಲಿ ಕತ್ತೆಯೊಂದು ನೀರು ಕುಡಿಯಲು ಅಲ್ಲಿಗೆ ಬಂದಿತು.
ಮೊಸಳೆ “ಈ ಜಗತ್ತಿನಲ್ಲಿ ನ್ಯಾಯ ನೀತಿ ಯಾವುದು ಇಲ್ಲ. ಇದೇ ಜೀವನ! ಅಲ್ಲವೇ?’ ಎಂದು ಕೇಳಿದಾಗ ಕತ್ತೆ ಹೂಂ ಎಂದು ತಲೆಯಾಡಿಸಿತು. ಆಗಲೂ ರವಿ ನಂಬಲಿಲ್ಲ. ಸ್ವಲ್ಪ ಹೊತ್ತಿನ ನಂತರ ನವಿಲು ಬಂದಿತು. ಅದೇ ಪ್ರಶ್ನೆ ಪ್ರಶ್ನೆಯನ್ನು ಕೇಳಿದಾಗ ನವಿಲು ಮೊಸಳೆಯ ಮಾತಿಗೆ ಸಮ್ಮತಿ ಸೂಚಿಸಲಿಲ್ಲ. ಮೊಸಳೆಗೆ ತುಂಬಾ ಕೋಪ ಬಂದು ಕೊಸರಾಡಿತು. ಈ ನಡುವೆ ಮೊಸಳೆಯ ಬಾಯಿ ಸಡಿಲಿಸಿದಾಗ ರವಿ ಇದೇ ಸರಿಯಾದ ಸಮಯವೆಂದು ಕೆರೆಯಿಂದ ಹೊರಕ್ಕೆ ಓಡಿಬಂದ.
ಮೊಸಳೆ ಮತ್ತೆ ರವಿಯನ್ನು ಹಿಡಿಯುವ ಪ್ರಯತ್ನ ನಡೆಸಿತಾದರೂ ಆಗಲಿಲ್ಲ. ಏಕೆಂದರೆ ಅದರ ಅರ್ಧ ಶರೀರ ಇನ್ನೂ ಬಲೆಯೊಳಗೆ ಸಿಕ್ಕಿಕೊಂಡಿತ್ತು. ನವಿಲು “ಅಯ್ನಾ ಮೊಸಳೆ ನೀನು ಜಾಣನಾಗಿದ್ದರೆ ಪೂರ್ತಿಯಾಗಿ ಬಲೆಯಿಂದ ಹೊರಬಂದಮೇಲೆಯೇ ಹುಡುಗನ್ನು ಹಿಡಿಯುತ್ತಿದ್ದೆ. ತುಂಬಾ ದುಡುಕಿಬಿಟ್ಟೆ. ಒಳ್ಳೆಯವರಿಗೆ ಇನ್ನೂ ಕಾಲವಿದೆ. ಇದೇ ನೋಡು ಪ್ರಪಂಚ’ ಎಂದಿತು. ತನ್ನನ್ನು ರಕ್ಷಿಸಿದ್ದಕ್ಕೆ ರವಿ ನವಿಲಿಗೆ ಕೃತಜ್ಞತೆ ಸಲ್ಲಿಸಿದ.
– ವೇದಾವತಿ ಹೆಚ್. ಎಸ್.