ದಾಂಡೇಲಿ: ದಾಂಡೇಲಿಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಎಂಬಂತೆ ದಾಂಡೇಲಿ ನಗರದ ಸಮೀಪದಲ್ಲಿರುವ ಕೇರವಾಡದ ಶ್ರೀ.ದಾಂಡೇಲಪ್ಪ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಮೊಸಳೆ ಪಾರ್ಕಿನ ವಿದ್ಯುಕ್ತ ಲೋಕಾರ್ಪಣೆ ಕಾರ್ಯಕ್ರಮವು ಭಾನುವಾರ ನಡೆಯಿತು.
ನೂತನ ಕ್ರೊಕಡೈಲ್ ಪಾರ್ಕನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆಯವರು, ಇಷ್ಟರ ಒಳಗಡೆ ಮೊಸಳೆ ಪಾರ್ಕ್ ಕಾಮಗಾರಿ ಮುಗಿದು ಲೋಕಾರ್ಪಣೆಯಾಗಬೇಕಿತ್ತು. ಕೋವಿಡ್ ಮುಂತಾದ ಕಾರಣಗಳಿಂದ ತಡವಾಗಿದೆ. ಈ ಭಾಗದ ಪ್ರವಾಸೋದ್ಯಮಕ್ಕೆ 2.99 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣಗೊಂಡ ನೂತನ ಮೊಸಳೆ ಪಾರ್ಕ್ ಹೊಸ ಆಯಾಮವನ್ನು ನೀಡುವಂತಾಗಲಿ ಎಂದ ಅವರು ಒಂದು ಕಾಲದಲ್ಲಿ ಕಾಗದ ಕಾರ್ಖಾನೆಯೆ ಜೀವನಾಡಿಯಾಗಿದ್ದ ದಾಂಡೇಲಿಗೆ ಇದೀಗ ಪ್ರವಾಸೋದ್ಯಮ ಕ್ಷೇತ್ರವು ಜೀವನಾಡಿಯಾಗುತ್ತಿರುವುದು ಸಂತಸದ ಬೆಳವಣಿಗೆ ಎಂದರು. ನೂತನ ಮೊಸಳೆ ಪಾರ್ಕನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುವುದರ ಮೂಲಕ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೊಸಳೆ ಪಾರ್ಕ್ ನಿರ್ಮಾಣದ ಗುತ್ತಿಗೆದಾರ ಜಯಶಂಕರ ಶೆಟ್ಟಿಯವರನ್ನು ಸನ್ಮಾನಿಸಲಾಯ್ತು. ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಹೊಲಿಗೆಯಂತ್ರ ಕೊಡಿಸಿರುವುದಕ್ಕೆ ಶಾಸಕ ಆರ್.ವಿ.ದೇಶಪಾಂಡೆಯವರನ್ನು ಸ್ಥಳೀಯ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರುಗಳು ಸನ್ಮಾನಿಸಿದರು.
ವೇದಿಕೆಯಲ್ಲಿ ಆಲೂರು ಗ್ರಾಮ ಪಂಚಾಯ್ತು ಅಧ್ಯಕ್ಷ ಲಕ್ಷ್ಮಣ ಜಾಧವ, ದಾಂಡೇಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಜಯಂತ್.ಎಚ್.ವಿ, ಆಲೂರು ಗ್ರಾಮ ಪಂಚಾಯ್ತು ಉಪಾಧ್ಯಕ್ಷೆ ನೂರಜಾನ್ ನದಾಫ್, ನಗರ ಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಗ್ರಾಮ ಪಂಚಾಯ್ತು ಸದಸ್ಯರುಗಳಾದ ಪ್ರಕಾಶ.ಜಿ.ಈ, ನಾಗರತ್ನಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ವಿ.ಆರ್.ಹೆಗಡೆ, ಮಾಜಿ ಜಿಲ್ಲಾ ಪಂಚಾಯ್ತು ಸದಸ್ಯ ಕೃಷ್ಣ ಪಾಟೀಲ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಡಿ.ವೈ.ಅಮರಗೋಳಕರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಎನ್.ಹಂಚಿನಮನಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ಕಿಂದಳ್ಕರ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
ಮೊಸಳೆ ಪಾಕ್ ಉದ್ಘಾಟನೆಯಾಗಿದ್ದರೂ ಅಗತ್ಯ ಮೂಲಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕಾಗಿದೆ. ಇನ್ನೂ ಶೌಚಾಲಯಕ್ಕೂ ನೀರಿನ ವ್ಯವಸ್ಥೆ ಇನ್ನಷ್ಟೆ ಆಗಬೇಕಾಗಿದೆ. ನಿಗಧಿತ ಕೆಲಸಕ್ಕಿಂದ ಹೆಚ್ಚುವರಿ ಮಾಡಲಾದ ಕಾಮಗಾರಿಯ ಮೊತ್ತ ಪಾವತಿಯೂ ಬಾಕಿಯಿದ್ದು, ಅದರ ಪಾವತಿಯೂ ಇನ್ನಷ್ಟೆ ಆಗಬೇಕಾಗಿದೆ.