ಅಲ್ ರಯಾನ್: 2018ರ ಫುಟ್‌ಬಾಲ್ ವಿಶ್ವಕಪ್ ಹೊತ್ತಿಗೆ ಕ್ರೊವೇಶಿಯಕ್ಕೆ ದುರ್ಬಲ ಎಂಬ ಹೆಸರಿತ್ತು. ಆದರೂ ತಂಡ ಆ ಬಾರಿ ಫೈನಲ್‌ಗೇರಿತ್ತು. ಅಂತಹದ್ದೇ ಛಾತಿಯನ್ನು ತಂಡವು ಈ ಬಾರಿಯೂ ಮುಂದುವರಿಸಿದೆ.
ಅದ್ಭುತ ಪ್ರದರ್ಶನ ನೀಡಿ ಪ್ರೀ ಕ್ವಾರ್ಟರ್ ಫೈನಲ್‌ಗೇರಿದ್ದ ಅದು, ಅಲ್ಲಿ ಜಪಾನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತ್ತು. ಶುಕ್ರವಾರ ಅಂತಹದ್ದೇ ಆಘಾತವನ್ನು ಬ್ರಝಿಲ್‌ಗೆ ನೀಡಿದ ಅದು ಸತತ ಎರಡನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಐದು ಬಾರಿಯ ಚಾಂಪಿಯನ್ ಆಗಿರುವ ಬ್ರಝಿಲ್ ತಂಡವನ್ನು ಕ್ರೊವೇಶಿಯ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿದೆ!
ನಿಗದಿತ 90 ನಿಮಿಷಗಳಲ್ಲಿ ಗೋಲು ದಾಖಲಾಗ ದಿದ್ದಾಗ, ಪಂದ್ಯ ಹೆಚ್ಚುವರಿ 30 ನಿಮಿಷಗಳಿಗೆ ವಿಸ್ತರಿಸ ಲ್ಪಟ್ಟಿತು. 106ನೇ ನಿಮಿಷದಲ್ಲಿ ನೇಮರ್ ಗೋಲು ಬಾರಿಸಿದರು. ಆದರೆ ಅವಧಿ ಮುಗಿಯಲು ಇನ್ನು ಕೇವಲ 4 ನಿಮಿಷಗಳಿದ್ದಾಗ ಬ್ರೂನೊ ಪೆಟ್ಕೊವಿಕ್ ಪವಾಡ ನಡೆಸಿ ಗೋಲು ಹೊಡೆದರು.
Related Articles
ಶೂಟೌಟ್ ಆಟ: ಕ್ರೊವೇಶಿಯ ಪರ ಸತತ ಶೂಟೌಟ್ ಗೋಲುಗಳು ಸಿಡಿಯಲ್ಪಟ್ಟವು. ನಿಕೋಲಾಸ್ ವ್ಲಾಸಿಕ್, ಲಾವ್ರೊ ಮೇಜರ್, ಲೂಕಾ ಮೊಡ್ರಿಕ್, ಮಿಸ್ಲಾವ್ ಆರ್ಸಿಕ್ ಗೋಲು ಹೊಡೆದರು. ಬ್ರಝಿಲ್ ಪರ ಕ್ಯಾಸೆಮಿರೊ, ಪೆಡ್ರೊಗೆ ಮಾತ್ರ ಯಶಸ್ಸು ಸಿಕ್ಕಿತು. 4ನೇ ಯತ್ನದಲ್ಲೇ ಕ್ರೊವೇಶಿಯ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿತು.