Advertisement

“ತೀರ್ಪನ್ನು ಟೀಕಿಸಿ, ಜಡ್ಜ್ ಗಳನಲ್ಲ’; ಮುಂದಿನ ಸಿಜೆಐ ಯು.ಯು.ಲಲಿತ್‌ ಹೇಳಿಕೆ

08:06 PM Aug 15, 2022 | Team Udayavani |

ನವದೆಹಲಿ: “ಯಾವುದೇ ತೀರ್ಪು ನಿಮಗೆ ಸರಿ ಕಾಣಲಿಲ್ಲ ಎಂದಾದಲ್ಲಿ ಆ ತೀರ್ಪನ್ನು ಟೀಕಿಸಿ ಅಥವಾ ಚರ್ಚಿಸಿ. ಅದರ ಬದಲು ನ್ಯಾಯಮೂರ್ತಿಗಳನ್ನು ಟೀಕಿಸಬೇಡಿ’ ಎಂದು ಸುಪ್ರೀಂ ಕೋರ್ಟ್‌ನ ಭಾವೀ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಹೇಳಿದ್ದಾರೆ.

Advertisement

“ಎನ್‌ಡಿಟಿವಿ’ ಸಂದರ್ಶನದಲ್ಲಿ ಮಾತನಾಡಿದ ಅವರು, “ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ಆದೇಶ ಮತ್ತು ತೀರ್ಪಿನ ಮೂಲಕ ಮಾತನಾಡುತ್ತಾರೆ. ಹಾಗಾಗಿ ಆ ತೀರ್ಪಿನ ಬಗ್ಗೆ ಚರ್ಚೆ ಮಾಡುವುದಕ್ಕೆ, ಟೀಕಿಸುವುದಕ್ಕೆ ಸಾರ್ವಜನಿಕರಿಂದ ಹಿಡಿದು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಇದರಲ್ಲಿ ಜಡ್ಜ್ಗಳನ್ನು ಎಳೆದು ತರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಕಡಿಮೆ ಜನರಿಂದ ಹೆಚ್ಚು ಕೆಲಸ:
ಆ.27ರಂದು ಈಗಿನ ಸಿಜೆಐ ಎನ್‌.ವಿ.ರಮಣ ಅವರು ನಿವೃತ್ತರಾಗಲಿದ್ದು, ಅವರ ನಂತರ ಅಧಿಕಾರ ಸ್ವೀಕರಿಸಲಿರುವ ನ್ಯಾಯಮೂರ್ತಿ ಯು.ಯು.ಲಲಿತ್‌ ಒಟ್ಟು 74 ದಿನಗಳ ಕಾಲ ಅಧಿಕಾರದಲ್ಲಿರಲಿದ್ದಾರೆ. ಈ ಅವಧಿಯಲ್ಲಿ ಇರುವ ಸಿಬ್ಬಂದಿ ವರ್ಗವನ್ನೇ ಬಳಸಿಕೊಂಡು ಹೆಚ್ಚಿನ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ. ಒಂದೇ ವಿಚಾರಕ್ಕೆ ಸಂಬಂಧಪಟ್ಟ ಅನೇಕ ಸಾಮಾನ್ಯ ಪ್ರಕರಣಗಳನ್ನು ಒಟ್ಟುಗೂಡಿಸಲಾಗುವುದು. ಉದಾಹರಣೆಗೆ ಆದಾಯ ತೆರಿಗೆಗೆ ಸಂಬಂಧಪಟ್ಟ ಪ್ರಕರಣಗಳು ಒಂದೇ ವಿಚಾರವನ್ನಾಧರಿಸುತ್ತದೆ. ಹಾಗಾಗಿ ಅಂಥವುಗಳನ್ನು ಸೇರಿಸಿ ವಿಚಾರಣೆ ನಡೆಸಿ ತೀರ್ಪು ಕೊಡಲಾಗುವುದು. ಆ ಮೂಲಕ ಬಾಕಿಯುಳಿದ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನ್ಯಾ. ಯು.ಯು.ಲಲಿತ್‌ ಅವರು ನವೆಂಬರ್‌ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

ನ್ಯಾಯ ಕೇವಲ ನ್ಯಾಯಾಲಯದ ಕೆಲಸವಲ್ಲ:
ದೇಶದಲ್ಲಿ ನ್ಯಾಯ ಎನ್ನುವುದು ಕೇವಲ ನ್ಯಾಯಾಂಗ ಪಾಲಿಸಬೇಕಾದದ್ದಲ್ಲ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಸಾಂವಿಧಾನಿಕ ನಂಬಿಕೆಯ ಭಂಡಾರಗಳು. ಈ ಮೂರಕ್ಕೂ ತಮ್ಮದೇ ಆದ ಜವಾಬ್ದಾರಿ ಇದೆ. ನ್ಯಾಯವು ಕೇವಲ ನ್ಯಾಯಾಂಗದ ಜವಾಬ್ದಾರಿಯಲ್ಲ. ಎಲ್ಲ ಅಂಗಗಳೂ ನ್ಯಾಯಕ್ಕಾಗಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಹಾಗೆಯೇ ಅವರು “ಕೋರ್ಟ್‌ ಆಫ್ ಇಂಡಿಯಾ- ಪಾಸ್ಟ್‌ ಆ್ಯಂಡ್‌ ಪ್ರಸೆಂಟ್‌’ ಪುಸ್ತಕದ ತೆಲುಗು ಅನುವಾದವನ್ನೂ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next