ಶಿವಮೊಗ್ಗ: ಸೋತವರು ಯಾವತ್ತೂ ತಾನು ಸೋತೆ ಎಂದು ಹೇಳುವುದಿಲ್ಲ. ಶಕ್ತಿಶಾಲಿಗಳು ಹಾಗೂ ಗೆದ್ದವರ ವಿರುದ್ಧ ದೂಷಣೆ ಮಾಡುವುದು ಸ್ವಾಭಾವಿಕ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಭಾರತದಲ್ಲಿ ಹಿಂದುತ್ವ ಜಾಗೃತಿಯಾಗಿದೆ. ಅದಕ್ಕೆ ಕಾರಣ ಆರೆಸ್ಸೆಸ್. ಹೀಗಾಗಿ ಹಿಂದುತ್ವದ ಜತೆಗೆ ಆರ್‌ಎಸ್‌ಎಸ್ ಟೀಕೆ ಮಾಡುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಾಮಮಂದಿರ ಆಗಲಿಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಬಿಜೆಪಿ ಕಾಲದಲ್ಲಿ. ಕಾಶಿಯ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಬಿಜೆಪಿ ಕಾಲದಲ್ಲಿ. ಮಥುರಾದಲ್ಲಿ ಸರ್ವೇಗೆ ಅರ್ಜಿ ಸಹ ಹೋಗಿರುವುದು ಬಿಜೆಪಿ ಕಾಲದಲ್ಲಿ. ಇಡೀ ದೇಶದಲ್ಲಿ 36,000 ದೇಗುಲಗಳು ಮಸೀದಿಗಳಾಗಿವೆ. ಅವುಗಳೆಲ್ಲ ಮತ್ತೆ ಹಿಂದೂಗಳ ಸುಪರ್ದಿಗೆ ಬರಬೇಕು ಎಂಬುದು ನಮ್ಮ ಉದ್ದೇಶ.
ಶಕ್ತಿಶಾಲಿಗಳ ವಿರುದ್ಧ ಸೋತವರು ಹತಾಶರಾಗಿ ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಭಾರತದಲ್ಲಿ ಜನಿಸಿ ಇಲ್ಲೇ ಬೆಳೆದು ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಾ ಜೀವಿಸುತ್ತಿರುವ ಮುಸ್ಲಿಂ ಬಾಂಧವರು ವಂದೇ ಮಾತರಂ ಹೇಳಿದರೆ ಅದನ್ನು ಸ್ವಾಗತಿಸುತ್ತೇನೆ ಮತ್ತು ಪ್ರೇರಣೆ ಎಂದು ಕರೆಯುತ್ತೇನೆ ಎಂದರು
ರಾವಣನ ಚಿಂತನೆಯುಳ್ಳ ಸಿದ್ದರಾಮಯ್ಯ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಓಡಿಸಲು ಜನರು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ವರುಣಾ ಕ್ಷೇತ್ರದಿಂದ ಓಡಿಸಿರುವ ಜನರು, ಮುಂದಿನ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೂ ಓಡಿಸಲಿದ್ದಾರೆ. ಸಿದ್ದರಾಮಣ್ಣನಿಗೆ ರಾಜ್ಯದಲ್ಲಿ ಈಗ ಜಾಗವಿಲ್ಲ.
-ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಆರ್‌ಎಸ್‌ಎಸ್ ಅಪ್ಪಟ ರಾಷ್ಟ್ರಭಕ್ತಿ ಹೊಂದಿರುವ ಸಂಸ್ಥೆ. ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಹಾಗೂ ಉಗ್ರಗಾಮಿಗಳಿಗೆ ಬೆಂಬಲ ಕೊಡುವವರು ನಿಜವಾದ ನಪುಂಸಕರು. ದೇಶಕ್ಕೆ ಗಂಡಾಂತರ ಬಂದಾಗ ಎದೆಯೊಡ್ಡಿ ನಿಲ್ಲುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ನವರಿಗಿಲ್ಲ.
-ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕಿಯ ಕಾರ್ಯದರ್ಶಿ