ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿರುವ “ಕ್ರಿಟಿಕಲ್ ಕೀರ್ತನೆಗಳು’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿರುವ ಕುಮಾರ್ ಈಗ “ಕ್ರಿಟಿಕಲ್ ಕೀರ್ತನೆಗಳು’ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಐಪಿಎಲ್ ಬೆಟ್ಟಿಂಗ್‌ನಿಂದ ಏನೆಲ್ಲಾ ತೊಂದರೆ ಆಗುತ್ತದೆ, ವರ್ಷಕ್ಕೆ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮನೆ ಮಾರಿಕೊಂಡು ಬೀದಿಗೆ ಬರುವ ವರ ಗೋಳು … ಇಂತಹ ಅಂಶಗಳನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಲಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ಕುಮಾರ್, “ಸಿನಿಮಾದಲಿ ತುಂಬಾ ಎಪಿಸೋಡ್‌ಗಳು ಬರುತ್ತವೆ. ಪ್ರತಿ ಎಪಿಸೋಡ್ ಪ್ರೇಕ್ಷಕರನ್ನು ನಗಿಸುತ್ತಾ ಸಾಗುತ್ತವೆ. ಇಲ್ಲಿನ ಎಲ್ಲಾ ಕಲಾವಿದರು ಹೀರೋಗಳೇ. ಪ್ರತಿಯೊಬ್ಬರಿಗೂ ಮಹತ್ವವಿದೆ. ನಾನು ನನ್ನ ಜೀವನದಲ್ಲಿ ನೋಡಿರುವ ಒಂದಷ್ಟು ನೈಜ ಅಂಶಗಳನ್ನಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ವಿವರ ಕೊಟ್ಟರು ಕುಮಾರ್.
ಇದನ್ನೂ ಓದಿ:‘ಕಸ್ತೂರಿ ಮಹಲ್’; ಭಯಪಡಿಸಲು ಶಾನ್ವಿ ರೆಡಿ
ಚಿತ್ರದಲ್ಲಿ ಕಲಾವಿದರ ದಂಡೇ ಇದೆ.”ಕ್ರಿಟಿಕಲ್ ಕೀರ್ತನೆಗಳು’ ಚಿತ್ರದಲ್ಲಿ ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್, ಧರ್ಮ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಧರ್ಮ, “ನಾನಿಲ್ಲಿ ಫೈನಾನ್ಷಿಯರ್ ಆಗಿ ನಟಿಸಿದ್ದೇನೆ. ಸಾಲ ತಗೊಂಡು ಬೆಟ್ಟಿಂಗ್‌ಗೆ ಬಳಸುವವರನ್ನು ಬೈಯುವ ಒಳ್ಳೆಯ ಫೈನಾನ್ಷಿಯರ್’ ಎಂದರು. ತರಂಗ ವಿಶ್ವ ಅವರದು ವಿಚಿತ್ರ ಪಾತ್ರವಂತೆ. ಒಬ್ಬೊಬ್ಬರೇ ಮಾತನಾಡಿಕೊಳ್ಳುವ, ಕ್ರಿಕೆಟರ್‌ಗಳ ಫೋಟೋ ಜೊತೆ ಮಾತನಾಡುವ ಪಾತ್ರವಂತೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತವಿದೆ.